ಹುಬ್ಬಳ್ಳಿ - ಧಾರವಾಡದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರೋಡ್‌ಗಳಿಗೆ ಡಾಂಬರು!
ಹುಬ್ಬಳ್ಳಿ - ಧಾರವಾಡ ಭಾಗದಲ್ಲಿ ಎಲ್ಲಿ ನೋಡಿದರೂ, ರಸ್ತೆ ಗುಂಡಿ ಹಾಗೂ ಧೂಳಿನದ್ದೇ ಸಮಸ್ಯೆ ಇದೀಗ ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಹುಬ್ಬಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೇಲ್ಸೇತುವೆ ಭಾಗದ ಕಾಮಗಾರಿಯಿಂದ ಸುತ್ತಮುತ್ತಲಿ ರಸ್ತೆಗಳು ಹಾಳಾಗಿವೆ. ದಿನನಿತ್ಯವೂ ಈ ಭಾಗದಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಇದೆ. ಅಲ್ಲದೇ ರಸ್ತೆಗಳು ಹಾಳಾಗಿದ್ದು ಜನ ಓಡಾಡಲು ಪರದಾಡುತ್ತಿದ್ದಾರೆ. ಇದೀಗ ಕೊನೆಗೂ ಇಲ್ಲಿನ ಪಾಲಿಕೆ ಮಾಸ್ಟರ್ ಪ್ಲ್ಯಾನ್‌ವೊಂದನ್ನು ಮಾಡಿಕೊಂಡಿದೆ.
ತ್ಯಾಜ್ಯ ಪ್ಲಾಸ್ಟಿಕ್‌ನಿಂದ ರಸ್ತೆ ನಿರ್ಮಾಣ - ಸುಸ್ಥಿರ ಅಭಿವೃದ್ಧಿಯತ್ತ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ದಿಟ್ಟ ಹೆಜ್ಜೆ ಇರಿಸಿರುವುದಾಗಿ ಹೇಳಿಕೊಂಡಿದೆ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಪ್ಲಾಸ್ಟಿಕ್ ಬಳಸುವ ಮೂಲಕ ಏಕಬಳಕೆಯ ಪ್ಲಾಸ್ಟಿಕ್‌ನಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸುವುದರ ಜೊತೆಗೆ, ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಕೂಡ ಬಳಕೆ ಮಾಡಿಕೊಳ್ಳಬಹುದೆಂದು ತೋರಿಸಿಕೊಟ್ಟಿದೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ. ಹೌದು ಹೊಸ ಮಾರ್ಗದ ಮೂಲಕ ರಸ್ತೆಗಳನ್ನು ಸುಸಜ್ಜಿತವಾಗಿಸುತ್ತಿದೆ.

ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ಪಾಲಿಕೆಯ ವತಿಯಿಂದ ಕೈಗೆತ್ತಿರೊಂಡಿರುವ ಡಾಂಬಾರು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಹುಬ್ಬಳ್ಳಿ - ಧಾರವಾಡದ ಪ್ರತಿ ಮನೆ ಮನೆಯಿಂದ ದಿನ ನಿತ್ಯ ಕಸ ಸಂಗ್ರಹಿಸುವ ಪಾಲಿಕೆ, ಅದನ್ನು ಮೊದಲು ಕಾಂಪ್ಯಾಕ್ಟರ್ ಸ್ಟೇಷನ್‌ಗೆ ಕೊಂಡೊಯ್ಯುತ್ತದೆ. ಅಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸಬಹುದಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸಿ, ಶ್ರೆಡ್ಡಿಂಗ್ ಮಷಿನ್ ಸಹಾಯದಿಂದ ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡಿ, ಡಾಂಬರ್ ಮಿಶ್ರಣ ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ಲಾಸ್ಟಿಕ್ ತುಂಡುಗಳನ್ನು ಡಾಂಬಾರು ಮಿಶ್ರಣ ಘಟಕದಲ್ಲಿ ಜೆಲ್ಲಿ ಮತ್ತು ಟಾರಿನ ಮಿಶ್ರಣದ ಜೊತೆ ಸೇರಿಸಲಾಗುತ್ತದೆ. ಬಿಟುಮಿನ್ ಜತೆಗೆ ಶೇ 8ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಮಿಶ್ರಣ ಮಾಡಲಾಗುತ್ತದೆ. ಇದರಿಂದ ರಸ್ತೆಗಳ ದೃಢತೆ ಹೆಚ್ಚುವುದಲ್ಲದೇ, ರಸ್ತೆ ಮೇಲೆ ನೀರು, ಬಿಟುಮಿನ್ ಹಾಳಾಗಿ, ಗುಂಡಿ ಬೀಳುವುದನ್ನು ಪ್ಲಾಸ್ಟಿಕ್ ತಪ್ಪಿಸುತ್ತದೆ.ಅಲ್ಲದೇ, ಸಾಮಾನ್ಯ ಡಾಂಬಾರು ರಸ್ತೆಗಿಂತ, ಪ್ಲಾಸ್ಟಿಕ್ ರಸ್ತೆಗೆ ಪ್ರತಿ ಒಂದು ಕಿಲೋ ಮೀಟರ್‌ಗೆ ₹1.5 ಲಕ್ಷ ಹಣ ಉಳಿತಾಯವಾಗಲಿದೆ.ಮುಂದಿನ ದಿನಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಾಣವಾಗುವ ಎಲ್ಲಾ ರಸ್ತೆಗಳಲ್ಲೂ ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಬಳಕೆ ಮಾಡಲು ಚಿಂತಿಸಲಾಗುತ್ತಿದೆ.
ಪ್ಲಾಸ್ಟಿಕ್ ತ್ಯಾಜ್ಯವು ಪರಿಸರವನ್ನು ಕಲುಷಿತಗೊಳಿಸುವುದನ್ನು ತಪ್ಪಿಸಲು ಅದನ್ನು ರಸ್ತೆ ನಿರ್ಮಾಣಕ್ಕಾಗಿ ಮರುಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ರಸ್ತೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಸಂಪನ್ಮೂಲವಾಗಿ ಪರಿವರ್ತಿಸಿದೆ ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಡಾಂಬರೂ ಹಾಕಿದರೂ ಕೆಲವು ರಸ್ತೆಗಳಲ್ಲಿ ಒಂದೇ ಮಳೆಗೆ ಸಮಸ್ಯೆ ಆಗುತ್ತಿತ್ತು. ಬಿಸಿಲ ಝಳ ಹೆಚ್ಚಳ ಹಾಗೂ ಧೂಳಿನಿಂದ ಕಂಗೆಟ್ಟಿದ್ದ ಈ ಭಾಗದ ಜನರಿಗೆ ಇದೀಗ ಕೊನೆಗೂ ಮಹಾನಗರ ಪಾಲಿಕೆಯಿಂದ ಗುಡ್‌ನ್ಯೂಸ್ ಸಿಕ್ಕಂತಾಗಿದೆ.












Click it and Unblock the Notifications