ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ಕೇಳಿದ AIMIM
ಹುಬ್ಬಳ್ಳಿ ನವೆಂಬರ್6: ದಶಕಗಳ ಕಾಲ ಹುಬ್ಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿದ್ದ ಹುಬ್ಬಳ್ಳಿಯ ಈದ್ಗಾ ವಿವಾದ ಸದ್ಯ ತಣ್ಣಗಾಗಿದೆ. ಹುಬ್ಬಳ್ಳಿಯ ಈದ್ಗಾ ಮೈದಾನಕ್ಕಾಗಿ 90ರ ದಶಕದಲ್ಲಿ ನಡೆದ ಹೋರಾಟದಿಂದ ಘಟಾನುಘಟಿ ನಾಯಕರಗಳು ಅಧಿಕಾರದ ಗದ್ದುಗೆ ಏರಿದರೆ, ಕೆಲವು ನಾಯಕರು ಜೈಲು ಪಾಲಾಗಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತಿ, ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಂಡಿದ್ದರು. ಈಗ ಶಾಂತವಿರುವ ಈದ್ಗಾ ಮೈದಾನ ಮತ್ತೆ ಚರ್ಚೆಗೆ ಕಾರಣವಾಗಿದೆ. ಒಂದಿಲ್ಲ ಒಂದು ವಿವಾದದಿಂದ ಮುನ್ನೆಲೆಗೆ ಬರ್ತಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ಈಗ ಮತ್ತೆ ಪ್ರಚಾರಕ್ಕೆ ಬಂದಿದೆ.
ಗಣೇಶ್ ಚತುರ್ಥಿ ನಂತರ ಈಗ ಮತ್ತೆ ಹುಬ್ಬಳ್ಳಿ ಈದ್ಗಾ ಮೈದಾನ ಮುನ್ನೆಲೆಗೆ ಬಂದಿದೆ. ನಗರದ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಲು ಮನವಿ ಮಾಡಲಾಗಿದೆ. ನಗರದ ಹೃದಯ ಭಾಗವಾದ ಈದ್ಗಾ ಮೈದಾನದಲ್ಲಿ ಎಐಎಂಐಎಂ ಪಕ್ಷದ ವತಿಯಿಂದ ವಿಜಯ ಗುಂಟ್ರಾಳ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಟಿಪ್ಪು ಸುಲ್ತಾನ್ 272 ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿತ್ತು. ಈಗ ಎಐಎಂಐಎಂ ಪಕ್ಷ ಟಿಪ್ಪು ಸುಲ್ತಾನ ಜಯಂತಿಗೆ ಅವಕಾಶ ನೀಡಲು ಒತ್ತಾಯ ಮಾಡಲಾಗಿದೆ.
ಈದ್ಗಾ ಮೈದಾನದಲ್ಲಿಯೇ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಹಿಂದು ಸಂಘಟನೆಗಳು ಹೊಸದಾಗಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿಯನ್ನು ಅಸ್ತಿತ್ವಕ್ಕೆ ತಂದು ಹೋರಾಟ ನಡೆಸಿದ್ದವು. ಅದರ ಫಲವಾಗಿ ಮೂರು ದಿನಗಳ ಕಾಲ ಗಣೇಶ ಹಬ್ಬ ಆಚರಿಸುವಂತೆ ಪಾಲಿಕೆ ಒಪ್ಪಿಗೆ ಸೂಚಿಸಿತ್ತು.
ಅದರಂತೆ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ. ಟಿಪ್ಪು ಸುಲ್ತಾನ್ ಅಭಿಮಾನಿಗಳಿಂದ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು. ಹಜರತ್ ಟಿಪ್ಪು ಸುಲ್ತಾನ್ ಓರ್ವ ದೇಶ ಭಕ್ತ ಕೂಡ ಆಗಿದ್ದರು. ಈದ್ಗಾ ಮೈದಾನದಲ್ಲಿ ಕಳೆದ ಗಣೇಶೋತ್ಸವ ಮೂರು ದಿನಗಳ ಕಾಲ ಆಚರಣೆ ಮಾಡಲಾಗಿದೆ. ಕೋಮು ಸೌಹಾರ್ದ ಕಾಪಾಡಲು ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಅವಕಾಶ ಬೇಕು ಎಂದು ಎಐಎಂಐಎಂ ಮುಖಂಡ ವಿಜಯ ಗುಂಟ್ರಾಳ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟ ರಣ ರೋಚಕ ಇತಿಹಾಸವನ್ನು ಹೊಂದಿದೆ. ಆದರೆ ದಶಕದ ಹಿಂದೆಯೇ ಹುಬ್ಬಳ್ಳಿಯ ಈದ್ಗಾ ವಿವಾದಕ್ಕೆ ಅಂತ್ಯ ಹಾಡಲಾಗಿದೆ. ಈಗ ಎಲ್ಲರೂ ಶಾಂತಿ ಸಹಬಾಳ್ವೆಯಿಂದ ದಿನ ದೂಡುತ್ತಿದ್ದಾರೆ. ಈಗ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದರಿಂದ ಮಹಾನಗರ ಪಾಲಿಕೆ ಮತ್ತೆ ಗೊಂದಲಕ್ಕೆ ಸಿಲುಕಿದೆ. ಈ ಕಗ್ಗಂಟನ್ನು ಯಾವ ರೀತಿ ಪಾಲಿಕೆ ನಿಭಾಯಿಸಲಿದೆ ಎಂಬುದು ಕುತೂಹಲವಾಗಿದ್ದು, ಮಹಾನಗರ ಪಾಲಿಕೆ ಇದನ್ನು ಸಮರ್ಥವಾಗಿ ನಿರ್ವಹಿಸಲಿ ಎನ್ನುವುದು ಎಲ್ಲರ ಆಶಯವಾಗಿದೆ.












Click it and Unblock the Notifications