Heartattack: NDA ಗೆ ನಿರೀಕ್ಷಿತ ಸೀಟು ಬಾರದಿದ್ದಕ್ಕೆ ಬಿಜೆಪಿ ಕಟ್ಟಾಭಿಮಾನಿ ಸಾವು
ಹುಬ್ಬಳ್ಳಿ, ಜೂನ್ 04: ಭಾರತದ ಸಾರ್ವತ್ರಿಕ ಚುನಾವಣೆ 2024ಯ ಫಲಿತಾಂಶ ಇಂದು ಹೊರ ಬಿದ್ದಿದೆ, ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಇದುವರೆಗಿನ ಮತ ಎಣಿಕೆಯಲ್ಲಿ NDA ಗೆ ಕಡಿಮೆ ಸ್ಥಾನ ಬಂದಿದ್ದಕ್ಕೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಟ್ಟಾಭಿಮಾನಿಗೆ ಹೃದಯಾಘಾತವಾಗಿದೆ.
ಹೌದು, ಬಿಜೆಪಿಯ ಕಟ್ಟಾಭಿಮಾನಿಯಾಗಿದ್ದ ಹುಬ್ಬಳ್ಳಿ ನಿವಾಸಿಗೆ, ಲೋಕಸಭಾ ಚುನಾವಣೆಯಲ್ಲಿಇಂದು ಎನ್‌ಡಿಎಗೆ ನಿರೀಕ್ಷಿತ ಬಹುಮತ ಸಿಗದ ಹಿನ್ನೆಲೆಯಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಇವರು ಹುಬ್ಬಳ್ಳಿಯ ಲಿಂಗರಾಜ ನಗರದ ಬಡಾವಣೆಯ ನಿವಾಸಿ ಎಂದು ತಿಳಿದು ಬಂದಿದೆ.

ಮೃತ ದುರ್ದೈವಿಯನ್ನು ಶಿವಪ್ರಕಾಶ್ ಹಿರೇಮಠ ಎಂದು ಗುರುತಿಸಲಾಗಿದೆ. ಮೊದಲಿಂದಲೂ ಅವರು ಬಿಜೆಪಿಯ ಕಟ್ಟಾ ಅಭಿಮಾನಿಯಾಗಿದ್ದರು. ಇಂದು (ಜೂನ್ 04) ಮನೆಯಲ್ಲಿ ಮತ ಎಣಿಕೆಯನ್ನು ಗಮನಿಸುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ 400 ವರೆಗೆ ಸೀಟು ಗಳಿಸಲಿದೆ ಎಂದು ಹೇಳಲಾಗುತ್ತಾ ಬರಲಾಗಿತ್ತು.
ಇದೀಗ ನಿರೀಕ್ಷೆಯಂತೆ ಸ್ಥಾನಗಳು ಬಾರದ ಹಿನ್ನೆಲೆಯಲ್ಲಿ ಅವರು ಬೇಸರಗೊಂಡಿದ್ದರು. ಇದರಿಂದ ಸೋಫಾ ಮೇಲೆ ಕೂತು ಟಿವಿ ನೋಡುತ್ತಿದ್ದ ಅವರು ಮಾನಸಿಕವಾಗಿ ತೀವ್ರ ಘಾಸಿಗೊಂಡ ಕಾರಣ ಹೃದಯಾಘಾತವಾಗಿದೆ. ಸೋಫಾ ಮೇಲಿಂದ ಕೆಳಕ್ಕೆ ಕುಸಿದು ಬಿದ್ದಿದ್ದಾರೆ.
ಮನೆಯಲ್ಲಿಯೇ ಹೃದಯಾಘಾತ ಆದ ಪರಿಣಾಮ ಕೂಡಲೇ ಕುಟುಂಬಸ್ಥರು ಅವರನ್ನು ಕೆಎಲ್ಇ ಸುಚಿರಾಯು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯವೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಈ ಬಗ್ಗೆ ಆಸ್ಪತ್ರೆಯಲ್ಲಿ ವೈದ್ಯರು ದೃಢಪಡಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
ಎನ್‌ಡಿಗೆ 293 ಕೇವಲ ಸೀಟು
ಸದ್ಯ ಮಂಗಳವಾರ ಸಂಜೆವರೆಗಿನ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಗೆ 293 ಸೀಟುಗಳು ಬಂದರೆ, ಇಂಡಿಯಾ ಒಕ್ಕೂಟಕ್ಕೆ 233 ಸೀಟುಗಳು ಲಭಿಸಿವೆ. ಇನ್ನು ಅಧಿಕೃತ ಮಾಹಿತಿ ಬರಬೇಕಿದೆ.












Click it and Unblock the Notifications