ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ಕೆಂದ್ರದಿಂದ ₹273 ಕೋಟಿ ಅನುದಾನ ಬಿಡುಗಡೆ
ಹುಬ್ಬಳ್ಳಿ, ಜೂನ್, 11: ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್ ಸುಧಾರಣೆ ಕಾರ್ಯಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಹಾಗೆರೇ ಕೇಂದ್ರವು ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ 273 ರೂಪಾಯಿ ಕೋಟಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ತಿಳಿಸಿದರು.
ಈ ಕುರಿತು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹುಬ್ಬಳ್ಳಿ-ಧಾರವಾಡ ರಾಜ್ಯದ 2ನೇ ಅತೀದೊಡ್ಡ ನಗರವಾಗಿದೆ. ಹಾಗೂ ಧಾರವಾಡದಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆ (IIT) ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಂತಹ ಬೃಹತ್ ಸಂಸ್ಥೆಗಳ ಕಾರ್ಯಾರಂಭ, ಹೆಚ್ಚುತ್ತಿರುವ ವಿಮಾನ ಪ್ರಯಾಣಿಕರ ಸಂಖ್ಯೆಯ ಹಿನ್ನೆಲೆಯಲ್ಲಿ ನಾನು ಈಗಿರುವ ಟರ್ಮಿನಲ್ ಕಟ್ಟಡದ ವಿಸ್ತೀರ್ಣದ ಕುರಿತು ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದೆ.

ಹಾಗೆಯೆ ಹೆಚ್ಚಳ ರನ್‌ವೇ ವಿಸ್ತೀರ್ಣ, ಆಪಾನ್ ವಿಸ್ತೀರ್ಣ ಹಾಗೂ ಕಾರ್ಗೋ ನಿರ್ವಹಣಾ ಸುಧಾರಣೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕಳೆದ ತಿಂಗಳಷ್ಟೇ ಬರೆದಿದ್ದೆ. ಪತ್ರಕ್ಕೆ ಉತ್ತರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಎಲ್ಲಾ ಸುಧಾರಣಾ ಕಾರ್ಯದ ಪ್ರಸ್ತಾವನೆ ತೀವ್ರ ಪರಿಶೀಲನೆ ನಡೆಸಿ ಈ ಒಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ನೂತನ ಯೋಜನೆಯಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ 20,000 ಚ.ಮಿ. ವಿಸ್ತರಣೆಗೊಳ್ಳಲಿದ್ದು, ಏಕಕಾಲಕ್ಕೆ 1,400ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. ವಿಸ್ತರಣೆ ಕಾಮಗಾರಿ ಜನವರಿಯಲ್ಲಿ ಆರಂಭವಾಗಲಿದ್ದು, ಎರಡು ವರ್ಷಗಳಲ್ಲಿ ಪ್ರಯಾಣಿಕರ ಉಪಯೋಗಕ್ಕೆ ಮುಕ್ತವಾಗಿಸುವ ಗುರಿ ಹೊಂದಲಾಗಿದೆ ಎಂದೂ ಜೋಶಿ ಅವರು ತಿಳಿಸಿದರು.
ಈ ಬೃಹತ್ ವಿಮಾನ ನಿಲ್ದಾಣದ ಸುಧಾರಣೆಗೆ ಹಾಗೂ ಉನ್ನತೀಕರಣ ಕಾರ್ಯ ಪೂರ್ಣಗೊಂಡಾಗ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ದಾರಿಯಾಗುತ್ತದೆ. ಅಲ್ಲದೆ ಅಲ್ಲಿಯವರೆಗೆ ದೇಶದ ಇತರ ಮಹತ್ವದ ನಗರಗಳಿಗೆ ವಿಮಾನಗಳ ಆರಂಭಕ್ಕೂ ಪ್ರಯತ್ನಿಸಲಾಗುವುದೆಂದೂ ಕೂಡ ಸಚಿವ ಜೋಶಿ ಈ ಸಂದರ್ಭದಲ್ಲಿ ಹೇಳಿದರು. ಈ ಸುಧಾರಣೆಯಿಂದ ಇಡೀ ಉತ್ತರ ಕರ್ನಾಟಕದ ಉದ್ದಿಮೆ ಕೈಗಾರಿಕೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಬೆಳವಣಿಗೆಗೂ ಸಹಾಯವಾಗಲಿದೆ ಎಂದು ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ಈಗಿನ 3,600 ಚದರ ಮೀಟರ್ ಗಾತ್ರದ ಟರ್ಮಿನಲ್ ಕಟ್ಟಡ ಈಗ ಪ್ರತಿ ವರ್ಷ 5 ಲಕ್ಷ ಪ್ರಯಾಣಿಕರ ನಿರ್ವಹಣೆಯಂತೆ, ಒಂದೇ ಸಮಯಕ್ಕೆ 300 ಪ್ರಯಾಣಿಕರಂತೆ ಸಾಮರ್ಥ್ಯವನ್ನು ಹೊಂದಿದೆ.
ಇದರೊಂದಿಗೆ 20,000 ಚೌರಸ ಮೀಟರ್ ಗಾತ್ರದ 1,400 ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯದ 3 ಏರೋಬ್ರಿಜ್ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಪರಿವರ್ತಿಸುವ ಯೋಜನೆ ಇದೆ. ಈಗಿನ 2600X45 ಮಿಟರ್ ಗಾತ್ರದ ರನ್ ವೇ ಹೆಚ್ಚಳ ಹಾಗೂ ಈಗಿರುವ ಅಪಾನ್ ಗಾತ್ರದ ಹೆಚ್ಚಳ ಸೇರಿದಂತೆ ಸಮಗ್ರವಾಗಿ ನಿಲ್ದಾಣದ ಅಭಿವೃದ್ಧಿ ಮಾಡಲಾಗುವುದೆಂದು ತಿಳಿಸಿದರು.
ಈ ಎಲ್ಲಾ ಸುಧಾರಣಾ ಕಾರ್ಯಗಳು ಮುಗಿದಾಗ ಹುಬ್ಬಳ್ಳಿ ವಿಮಾನ ನಿಲ್ದಾಣ ಅವಳಿ ನಗರದ ಹೆಮ್ಮೆ ಆಗುವುದರಲ್ಲಿ ಸಂದೇಹವಿಲ್ಲ. ಹಾಗೂ ಈ ಸುಧಾರಣಾ ಪ್ರಸ್ತಾವನೆಗೆ ಬೇಗನೇ ಅನುಮತಿ ನೀಡಿ, ಬೇಗನೇ ಕಾರ್ಯ ಆರಂಭವಾಗುವಂತೆ ವಿಮಾನ ನಿಲ್ದಾಣ ವಿಸ್ತರಣೆಗೆ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಹಾಗೂ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೂ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.












Click it and Unblock the Notifications