11 ವಿಮಾನ ನಿಲ್ದಾಣದ ನಿರ್ವಹಣೆ ಖಾಸಗಿಗೆ, ಕರ್ನಾಟಕದ ಒಂದು ನಿಲ್ದಾಣ
ಹುಬ್ಬಳ್ಳಿ, ಮಾರ್ಚ್ 19: ಕೇಂದ್ರ ಸರ್ಕಾರ ದೇಶದ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿ ಅವರಿಗೆ ವಹಿಸಲು ತಯಾರಿ ನಡೆಸಿದೆ. ಪಿಪಿಪಿ ಮಾದರಿಯಲ್ಲಿ ನಿರ್ವಹಣೆ ಮಾಡಲು 11 ವಿಮಾನ ನಿಲ್ದಾಣಗಳನ್ನು ಗುರುತಿಸಲಾಗಿದೆ. 2022-25ರ ತನಕ 25 ವಿಮಾನ ನಿಲ್ದಾಣಗಳನ್ನು ಖಾಸಗಿ ಅವರಿಗೆ ವಹಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಈ ಪಟ್ಟಿಯಲ್ಲಿ ಕರ್ನಾಟಕದ ಒಂದು ವಿಮಾನ ನಿಲ್ದಾಣವಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ದೇಶದ 11 ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಅವರಿಗೆ ನೀಡಲು ಮುಂದಾಗಿದೆ. ಇದರಲ್ಲಿ 5 ದೊಡ್ಡ ಮತ್ತು 6 ಸಣ್ಣ ವಿಮಾನ ನಿಲ್ದಾಣಗಳು ಸೇರಿವೆ.

ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ರಾಜ್ಯಸಭೆ ಕಲಾಪದಲ್ಲಿ ಈ ಕುರಿತು ಲಿಖಿತ ಉತ್ತರವನ್ನು ನೀಡಿದ್ದಾರೆ. ಸಾರ್ವಜನಿಕ ಖಾಸಗಿ ಪಾಲುದಾರಿಕೆ ಅಡಿಯಲ್ಲಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 11 ನಿಲ್ದಾಣಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಯಾವ-ಯಾವ ನಿಲ್ದಾಣಗಳು: ಕೇಂದ್ರ ಸರ್ಕಾರ ಗುರುತಿಸಿರುವ ವಿಮಾನ ನಿಲ್ದಾಣಗಳಲ್ಲಿ ಅಮೃತಸರ, ವಾರಾಣಸಿ, ಭುವನೇಶ್ವರ, ರಾಯ್ಪುರ ಮತ್ತು ತಿರುಚ್ಚಿ ವಿಮಾನ ನಿಲ್ದಾಣಗಳು ಸೇರಿವೆ. ಅಲ್ಲದೇ ಈ 5 ನಿಲ್ದಾಣಗಳ ಜೊತೆ ಆರು 6 ಸಣ್ಣ ವಿಮಾನ ನಿಲ್ದಾಣಗಳನ್ನು ಗುರುತಿಸಲಾಗಿದೆ.
ಇಂಧೋರ್, ಕ್ಯಾಲಿಕಟ್, ಕೊಯಮತ್ತೂರು, ನಾಗ್ಪುರ, ಪಾಟ್ನಾ, ಮಧುರೈ, ಸೂರತ್, ರಾಂಚಿ, ಜೋಧ್‌ಪುರ್, ಚೆನ್ನೈ, ವಿಜಯವಾಡ, ವಡೋದರ, ಭೋಪಾಲ್, ತಿರುಪತಿ, ಹುಬ್ಬಳ್ಳಿ, ಇಂಫಾಲ, ಅರ್ಗತಾಲ, ರಾಜಮಂಡ್ರಿ ವಿಮಾನ ನಿಲ್ದಾಣಗಳು ಈ ಪಟ್ಟಿಯಲ್ಲಿವೆ.
2022 ರಿಂದ 25ರ ತನಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಣೆ ಮಾಡುವ 25 ವಿಮಾನ ನಿಲ್ದಾಣಗಳನ್ನು ರಾಷ್ಟ್ರೀಯ ನಗದೀಕರಣ ಯೋಜನೆಯಡಿ ಗುತ್ತಿಗೆ ನೀಡಲು ಗುರುತಿಸಲಾಗಿದೆ. ಈ ಕ್ರಮಗಳಲ್ಲಿ ಹೊಸ ಮೂಲಸೌಕರ್ಯ ಯೋಜನೆಗಳಿಗೆ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಆದಾಯವನ್ನು ಬಳಸಿಕೊಂಡು ಹಣಕಾಸು ಒದಗಿಸುವ ಉದ್ದೇಶವಿದೆ.
ಪ್ರಸ್ತುತ, ದೇಶದಲ್ಲಿ 159 ವಿಮಾನಗಳು ಕಾರ್ಯ ನಿರ್ವಹಣೆಯಲ್ಲಿವೆ. ದೆಹಲಿ ಹೈಕೋರ್ಟ್ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮತ್ತು ಕೇಂದ್ರ ಸರ್ಕಾರಕ್ಕೆ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗೆ ಅನುಮತಿಸುವ ನಿರ್ಧಾರದ ವಿಚಾರದಲ್ಲಿ ನೋಟಿಸ್ ನೀಡಿದೆ.
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಹಿಂಡನ್ ವಾಯುನೆಲೆಯಲ್ಲಿ ವಿಮಾನಗಳ ವಾಣಿಜ್ಯ ಸಂಚಾರ ಅಗತ್ಯವಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಹೇಳಿದೆ. ಎರಡು ವಿಮಾನ ನಿಲ್ದಾಣಗಳ ನಡುವೆ 150 ಕಿ. ಮೀ. ಅಂತರ ಇರಬೇಕು ಎಂಬ ನಿಯಮವನ್ನು ಹಿಂಡನ್ ವಾಯುನೆಲೆ ಉಲ್ಲಂಘನೆ ಮಾಡಿದೆ ಎಂದು ಕೋರ್ಟ್‌ಗೆ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಈಗಾಗಲೇ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹ ನೋಡಿಕೊಳ್ಳುತ್ತಿದೆ. 2020 ಅಕ್ಟೋಬರ್ 30ರಂದು ಅದಾನಿ ಸಮೂಹ ಈ ಜವಾಬ್ದಾರಿ ವಹಿಸಿಕೊಂಡಿದೆ. ಮೂರು ವರ್ಷಗಳ ಬಳಿಕ ಎಎಐ ಸಹಭಾಗಿತ್ವದಿಂದಲೂ ವಿಮಾನ ನಿಲ್ದಾಣದ ಬೇರ್ಪಡಲಿದ್ದು, ಸಂಪೂರ್ಣ ನಿರ್ವಹಣೆ ಅದಾನಿ ಸಮೂಹದ ಪಾಲಾಗಿದೆ.












Click it and Unblock the Notifications