ಗಾಜನೂರು ಜಲಾಶಯದಿಂದ ತುಂಗಾ ಮೇಲ್ದಂಡೆ ಕಾಲುವೆಗಳಿಗೆ ನೀರು: ಒಣಗುತ್ತಿರುವ ಬೆಳೆಗೆ ಆಸರೆ
ಹಾವೇರಿ, ಆಗಸ್ಟ್ 22: ತುಂಗಾ ಮೇಲ್ದಂಡೆಯಲ್ಲಿನ ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದು, ಮಳೆಯಿಲ್ಲದೆ ಕಂಗಾಲಾಗಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ, ಹಿರೇಕೆರೂರು, ರಾಣೆಬೆನ್ನೂರ, ಹಾವೇರಿ ತಾಲೂಕಿನ ರೈತರ ಜಮೀನುಗಳಿಗೆ ನೀರುಣಿಸುವ ಉದ್ದೇಶದಿಂದ ಗಾಜನೂರು ಜಲಾಶಯದಿಂದ ನೀರು ಹರಿಸಲಾಗುತ್ತಿದೆ.
ಕಳೆದ ತಿಂಗಳು ಸುರಿದ ಮಳೆ ನೆಚ್ಚಿಕೊಂಡು ಬಿತ್ತನೆ ಮಾಡಿದ್ದ ರೈತರಿಗೆ ಆಗಸ್ಟ್ನಲ್ಲಿ ಮಳೆ ಕೈಕೊಟ್ಟಿತು. ವಾಡಿಕೆ ಮಳೆಗಿಂತ ಕಡಿಮೆಯಾದ ಕಾರಣ ಬೆಳೆಗಳ ನಾಶಕ್ಕೆ ಮುಂದಾಗಿದ್ದ ರೈತರಿಗೆ ಕಾಲುವೆ ನೀರು ಜೀವ ಜಲವಾಗಿ ಪರಿಣಮಿಸಿದೆ. ಗಾಜನೂರ ಡ್ಯಾಮ್ಂದ ಬರುವ ತುಂಗಾ ನೀರು ಜಿಲ್ಲೆಯ 73,239 ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರು ತಲುಪುತ್ತದೆ.

ಕಳೆದ ತಿಂಗಳು ಬಿತ್ತನೆ ಮಾಡಿದ ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ, ಹೆಸರು, ಉಳ್ಳಾಗಡ್ಡಿ ಸೇರಿದಂತೆ ಇತರ ಬೆಳೆಗಳು ಮಳೆಯಿಲ್ಲದೆ ಒಣಗಲಾರಂಭಿಸಿದ್ದವು. ಆದರೆ, ಕಾಲುವೆ ಮೂಲಕ ನೀರು ಹರಿಯುತ್ತಿರುವುದರಿಂದ ಬೆಳೆಗಳಿಗೆ ಜೀವ ಕಳೆ ಬಂದಿದೆ. ಯೋಜನೆಯ 169 ಕಿ.ಮೀ. ಉದ್ದದ ಕಾಲುವೆಯ ಪೈಕಿ 143 ಕಿ.ಮೀ ಕಾಲುವೆಯಲ್ಲಿ ನೀರು ಹರಿಯುತ್ತಿದೆ. ಇದರಿಂದ ಹಿರೆಕೇರೂರು-ರಟ್ಟಿಹಳ್ಳಿ ತಾಲೂಕಿನ 9468 ಹೆಕ್ಟೇರ್, ರಾಣೆಬೆನ್ನೂರ ತಾಲೂಕಿನ 33,705 ಹೆಕ್ಟೇರ್ ಹಾಗೂ ಹಾವೇರಿ ತಾಲೂಕಿನ 27,908 ಹೆಕ್ಟೇರ್ಪ್ರದೇಶದ ಜಮೀನುಗಳಿಗೆ ಪ್ರಸ್ತುತ ನೀರು ದೊರೆಯುತ್ತಿದೆ.
ಹಾವೇರಿ ತಾಲೂಕಿನ ಹೊಸಳ್ಳಿ ಹಾಗೂ ಕನಕಾಪುರ ಗ್ರಾಮದ ಬಳಿ 600 ಮೀಟರ್ ಭೂ ಸ್ವಾಧೀನ ಪ್ರಕ್ರಿಯ ವಿಳಂಭವಾಗಿರುವ ಹಿನ್ನೆಲೆಯಲ್ಲಿ ಹಾವೇರಿ ಹಾಗೂ ಹಾನಗಲ್ಲ ತಾಲೂಕಿನ 26 ಕಿ.ಮಿ. ಉದ್ದದ ಕಾಲುವೆಗೆ ನೀರು ಹರಿಯದ ಕಾರಣ 6 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯುತ್ತಿಲ್ಲ. ಯೋಜನೆಯಲ್ಲಿನ ಬಹುತೇಕ ಕಾಲುವೆಗಳಲ್ಲಿ ಹೂಳು ತುಂಬಿದ್ದು, ಗಿಡಗಂಟಿಗಳು ಬೆಳೆದಿರುವ ಕಾರಣ ಕಿರು ಕಾಲುವೆಗಳಲ್ಲಿ ನೀರು ಹರಿದು ಬರುತ್ತಿಲ್ಲ.
ರೈತರ ಜಮೀನುಗಳಿಗೆ ನೀರುಣಿಸುವ ಉದ್ದೇಶದಿಂದ ಅನುಷ್ಠಾನವಾಗಿರುವ ಈ ಯೋಜನೆಯ ಮೂಲಕ ಪ್ರಸ್ತುತ 73,239 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯುತ್ತಿದೆ. ಕಾಲುವೆ ಅಚ್ಚುಕಟ್ಟು ಪ್ರದೇಶದ ಸಾವಿರಾರು ಹೆಕ್ಟೇರ್ ಪ್ರದೇಶದ ರೈತರು ವಿವಿಧ ರೀತಿಯಲ್ಲಿ ನೀರು ಪಡೆದುಕೊಳ್ಳುತ್ತಿದ್ದಾರೆ ಎಂದು ತುಂಗಾ ಮೇಲ್ದಂಡೆ ಯೋಜನೆ, ರಾಣೆಬೆನ್ನೂರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಕೆಲವು ಕಾಲುವೆಗಳಲ್ಲಿ ಹೂಳು ತುಂಬಿ ಗಿಡಗಂಟಿಗಳು ಬೆಳೆದಿವೆ. ಕಾಲುವೆಗಳನ್ನು ದುರಸ್ತಿ ಮಾಡದೆ ಇರುವುದರಿಂದ ನೀರು ಹರಿದು ಬರುತ್ತಿಲ್ಲ. ಮುಖ್ಯ ಕಾಲುವೆ ನಂತರ ಬರುವ ಒಂದೆರಡು ಕಾಲುವೆಗಳಿಗೆ ಮಾತ್ರ ನೀರು ಹರಿಯುತ್ತಿದೆ. ಸಣ್ಣ ಸಣ್ಣ ಕಾಲುವೆಗಳಿಗೆ ಇನ್ನೂ ನೀರು ಹರಿದು ಬರುತ್ತಿಲ್ಲ. ಆದ್ದರಿಂದ ಯುಟಿಪಿ ಅಧಿಕಾರಿಗಳು ಯೋಜನೆಯ ಎಲ್ಲ ಕಾಲುವೆಗಳಿಗೆ ನೀರು ಹರಿಯುವಂತೆ ಮಾಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯರು ಹೇಳಿದ್ದಾರೆ.












Click it and Unblock the Notifications