ಹಾವೇರಿ: ರೀಲ್ಸ್ ಮಾಡುವ ನೆಪದಲ್ಲಿ ಭಾವಿ ಪತಿಯನ್ನು ಪಾರ್ಕ್‌ಗೆ ಕರೆದು ಕುತ್ತಿಗೆ ಇರಿದ 17 ವರ್ಷದ ಬಾಲಕಿ
ಹಾವೇರಿ, ಏಪ್ರಿಲ್. 09: ಹಾವೇರಿ ಜಿಲ್ಲೆಯ ಹದಿಹರೆಯದ ಯುವತಿಯೊಬ್ಬಳು ತಾನು ಮದುವರಯಾಗಬೇಕಿದ್ದ ವರನನ್ನು ಇನ್‌ಸ್ಟಾಗ್ರಾಮ್ ರೀಲ್ ಮಾಡುವ ನೆಪದಲ್ಲಿ ಪಾರ್ಕ್‌ಗೆ ಕರೆದು ನಂತರ ಚಾಕುವಿನಿಂದ ಇರಿದಿದ್ದಾಳೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ರಾಣೆಬೆನ್ನೂರು ಪೊಲೀಸರು 17 ವರ್ಷದ ಬಾಲಕಿಯನ್ನು ಬಂಧಿಸಿದ್ದು, ಸಂತ್ರಸ್ತ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಯ ಪ್ರಕಾರ, ಸಂತ್ರಸ್ತ ದೇವೇಂದ್ರ ಗೌಡ ಅವರಿಗೆ ಆರೋಪಿ ಬಾಲಕಿಯೊಂದಿಗೆ ಮಾರ್ಚ್ 3 ರಂದು ನಿಶ್ಚಿತಾರ್ಥ ನಡೆದಿತ್ತು. ಬಳಿಕ ಆಕೆ ಇನ್‌ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡೋಣ ಎಂದು ಭಾವಿ ಪತಿಯನ್ನು ರಾಣೆಬೆನ್ನೂರಿನ ಉದ್ಯಾನವನಕ್ಕೆ ಆಹ್ವಾನಿಸಿದ್ದಾರೆ. ಇನ್‌ಸ್ಟಾಗ್ರಾಮ್ ರೀಲ್‌ಗಳಿಗೆ ಒಟ್ಟಿಗೆ ಡ್ಯಾನ್ಸ್ ಮಾಡುವ ಕೆಲವು ಆಲೋಚನೆಗಳು ತನಗೆ ಇದೆ ಎಂದು ಯುವಕನಿಗೆ ತಿಳಿಸಿದ್ದಾರೆ.

ಇದರ ಜೊತೆಗೆ ಸರ್ಪ್ರೈಸ್ ಗಿಫ್ಟ್ ಕೊಡುವ ಯೋಜನೆ ಹಾಕಿಕೊಂಡಿದ್ದು, ಪಾರ್ಕ್ ಗೆ ಬಂದ ನಂತರ ಕೊಡುವುದಾಗಿ ಬಾಲಕಿ ಹೇಳಿದ್ದಾಳೆ. ದೇವೇಂದ್ರ ಗೌಡ ಉದ್ಯಾನವನಕ್ಕೆ ಬಂದು ಉಡುಗೊರೆ ಕೇಳಿದಾಗ, ಹುಡುಗಿ ಅವನ ಕೈಗಳನ್ನು ಹಗ್ಗದಿಂದ ಕಟ್ಟಿ ಕಣ್ಣು ಮುಚ್ಚಿದ್ದು, ಇದು ಸರ್ಪ್ರೈಸ್ ಗಿಫ್ಟ್ ಎಂದು ಹೇಳಿದ್ದಾಳೆ. ನಂತರ ಆಕೆಯು ಚಾಕುವಿನಿಂದ ಯುವಕನ ಕುತ್ತಿಗೆ ಇರಿದು ಪಾರ್ಕ್‌ನಿಂದ ಪರಾರಿಯಾಗಿದ್ದಾಳೆ ಎಂದು ವರದಿಯಾಗಿದೆ.
ಪಾರ್ಕ್‌ನಲ್ಲಿದ್ದ ಇತರರು ಕೂಡಲೇ ಗಾಯಾಳು ದೇವೇಂದ್ರ ಗೌಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಾದ ಬಳಿಕ ಸಂತ್ರಸ್ತನಿಂದ ಮಾಹಿತಿ ಪಡೆದ ದೇವೇಂದ್ರ ಗೌಡನ ಪೋಷಕರು ಬಾಲಕಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ರಾಣೆಬೆನ್ನೂರು ಪಟ್ಟಣದ ಹೊರವಲಯದಲ್ಲಿರುವ ಓಂ ಪಬ್ಲಿಕ್ ಸ್ಕೂಲ್ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಂತ್ರಸ್ತ ದೇವೇಂದ್ರ ಗೌಡ ಸ್ಥಿತಿ ಗಂಭೀರವಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಘಟನೆಗೆ ಕಾರಣವಾದ ವಿಷಯಯಾವುದು ಎಂಬ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.












Click it and Unblock the Notifications