'ಇಂಡಿಯಾ ಎನರ್ಜಿ ವೀಕ್'ಗೆ ಪ್ರಧಾನಿ ಚಾಲನೆ, ಎಥೆನಾಲ್ ಘಟಕಕ್ಕೆ ಶೇ.95 ಆರ್ಥಿಕ ನೆರವು: ಬೊಮ್ಮಾಯಿ
ಹಾವೇರಿ, ಡಿಸೆಂಬರ್ 18: ಮುಂದಿನ ವರ್ಷ ಫೆಭ್ರವರಿಯಲ್ಲಿ ಕರ್ನಾಟಕದಲ್ಲಿ 'ಇಂಡಿಯಾ ಎನರ್ಜಿ ವೀಕ್-2023' ನಡೆಯಲಿದೆ. ವಿವಿಧ ದೇಶಗಳ ಸುಮಾರು 10ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕೋಣನಕೇರಿಯಲ್ಲಿ ವಿಐಎಪ್‌ಪಿ ಡಿಸ್ಟಿಲರೀಸ್ ಆಂಡ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ ಗ್ರಾಮದಲ್ಲಿ ಆಯೋಜಿಸಿದ್ದ 3,000 ಕೆಎಲ್‌ಪಿಡಿ ಎಥೆನಾಲ್ ಹಾಗೂ ಸಕ್ಕರೆ ಕಾರ್ಖಾನೆಯ ಉದ್ಘಾಟಿಸಿ ಅವರು ಮಾತನಾಡಿದರು.
'ಎನರ್ಜಿ ವೀಕ್' ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಸುಮಾರು ಹತ್ತು ಸಾವಿರ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಇಂಧನ ಉತ್ಪಾದನೆ, ನೀತಿಗಳ ಬಗ್ಗೆ ಚಿಂತನೆ ನಡೆಯುವ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹೆಚ್ಚು ಆರ್ ಎಂಡ್ ಡಿ ಕೇಂದ್ರಗಳನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಇಂಧನ ಸಪ್ತಾಹವನ್ನು ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.

ಎಥೆನಾಲ್ ಕಾರ್ಖಾನೆ ಸ್ಥಾಪನೆಗೆ ಶೇ.95 ಆರ್ಥಿಕ ನೆರವು
ಎಥನಾಲ್ ಕಾರ್ಖಾನೆಗಳಿಗೆ ಬಹಳ ಬೇಡಿಕೆ ಇದೆ. ಇದರ ಸ್ಥಾಪನೆಗೆ ಶೇ.6 ಬಡ್ಡಿ ಸಹಾಯಧನ ಹಾಗೂ ಶೇ.95 ರಷ್ಟು ಆರ್ಥಿಕ ನೆರವು ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಸಂಕೂರು, ಹಿರೇಕೆರೂರುಗಳಲ್ಲಿ ಎಥೆನಾಲ್ ಘಟಕಗಳಿದ್ದು ಇನ್ನೂ ಹೆಚ್ಚಿನ ಕಾರ್ಖಾನೆಗಳು ಬರಲಿವೆ. ಇವುಗಳಿಗೆ ಸರ್ಕಾರ ಅನುಮತಿಯನ್ನು ನೀಡಲಿದೆ. ಎಥೆನಾಲ್ ಕಾರ್ಖಾನೆಗಳಿಂದ ರೈತರ ಅಭ್ಯುದಯ, ಸ್ಥಳೀಯರಿಗೆ ಉದ್ಯೋಗ ಹಾಗೂ ಸರ್ಕಾರಕ್ಕೆ ಆದಾಯಗಳನ್ನು ಕಾಣಬಹುದಾಗಿದೆ ಎಂದರು.

ಜೈವಿಕ ಇಂಧನಕ್ಕೆ ಭಾರಿ ಬೇಡಿಕೆ ಸೃಷ್ಟಿ
ಮುಂದಿನ 50 ವರ್ಷಗಳಲ್ಲಿ ಜೈವಿಕ ಇಂಧನಕ್ಕೆ ಬಹಳ ಬೇಡಿಕೆ ಬರುತ್ತದೆ. ಪರಿಸರ , ಆರ್ಥಿಕತೆ ಹಾಗೂ ಇಂಧನಶಕ್ತಿ ಇವುಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಇವುಗಳ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ. ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ದೇಶದ ಮುಂದಿನ ಭವಿಷ್ಯ ಬರೆಯುವ ಕಾರ್ಯ ರಾಜ್ಯದಲ್ಲಾಗುತ್ತಿದೆ. ಎಥೆನಾಲ್ ಕಾರ್ಖಾನೆಯಲ್ಲಿ ಶಿಗ್ಗಾಂವ್ ಕ್ಷೇತ್ರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿ ಹಾಗೂ ಮುಂದಿನ ದಿನಗಳಲ್ಲಿ ಕಾರ್ಖಾನೆ ವಿಸ್ತರಣೆಯಾಗಲಿ ಎಂದು ಅವರು ಆಶಿಸಿದರು.

ಎಥೆನಾಲ್ ಉತ್ಪಾದನೆ ಹಾಗೂ ಸ್ಥಳೀಯರಿಗೆ ಉದ್ಯೋಗ
ದೇಶದಲ್ಲಿ ಅತೀ ಹೆಚ್ಚು ಸಕ್ಕರೆ, ಆಲ್ಕೋಹಾಲ್ ಎಥೆನಾಲ್ ಉತ್ಪಾದನೆ ಹಾಗೂ 400.ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಕಾರ್ಖಾನೆ ಪ್ರಾರಂಭಿಸಲು ಜಿಲ್ಲಾ ಉಸ್ತುವಾರಿ ಶಿವರಾಂ ಹೆಬ್ಬಾರ್ ಅವರು ಚಾಕಚಕ್ಯತೆ ಹೊಂದಿದ್ದಾರೆ. ಈ ಜಿಲ್ಲೆಯ ಭಾಗದ ರೈತರನ್ನು ಉತ್ತಮವಾಗಿ ನೋಡಿಕೊಳ್ಳುವಂತೆ, ಯುವಕರಿಗೆ ಉದ್ಯೋಗ ನೀಡುವಂತೆ ಅವರನ್ನು ಕೋರಿದ್ದೇವೆ. ಮನವಿಗೆ ಅವರು ಸ್ಪಂದಿಸಿದ್ದಾರೆ. ಕಾರ್ಖಾನೆಗಳ ಸ್ಥಾಪನೆಯಿಂದ ನೇರವಾಗಿ ಸುಮಾರು 500 ಜನಕ್ಕೆ ಉದ್ಯೋಗ ದೊರೆಯಲಿದೆ. ಪರೋಕ್ಷವಾಗಿ 2ರಿಂದ 3 ಸಾವಿರ ಜನಕ್ಕೆ ಉದ್ಯೋಗ ನೀಡಲಿದ್ದಾರೆ. ಕಬ್ಬು ಅರೆಯುವ ಸಾಮರ್ಥ್ಯ 300 ಕೆ.ಎಲ್.ಪಿ.ಡಿ, ಡಿಸ್ಟಿಲರಿ ಕೂಡ ಇದ್ದು, ಅದರಿಂದ ಎಥನಾಲ್ ಉತ್ಪಾದನೆಯೂ ಆಗುತ್ತದೆ ಎಂದು ಬೊಮ್ಮಾಯಿ ವಿವರಿಸಿದರು.

2022ರಲ್ಲೇ ಎಥೆನಾಲ್ ಘಟಕ ಸ್ಥಾಪನೆಯ ಗುರಿ ಶೇ.10
ದೇಶದ ಆರ್ಥಿಕತೆ ಬೆಳೆಯಲು ವಿದ್ಯುತ್ ಉತ್ಪಾದನೆ ಜೊತೆಗೆ ಪರಿಸರದ ರಕ್ಷಣೆಯೂ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಜೈವಿಕ ಇಂಧನಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ವಾಜಪೇಯಿ ಅವರ ಕಾಲದಲ್ಲಿ ಎಥೆನಾಲ್ ಘಟಕ ಪ್ರಾರಂಭವಾಯಿತು. 2024ಕ್ಕೆ ಶೇ.10ರಷ್ಟು ಗುರಿ ಸಾಧಿಸಬೇಕು ಎಂದುಕೊಳ್ಳಲಾಗಿತ್ತು. ಆದರೆ 2022ಕ್ಕೆ ಈ ಗುರಿ ಸಾಧಿಸಲಾಗಿದೆ. 2025ಕ್ಕೆ ಶೇ.20 ರಷ್ಟು ಎಥೆನಾಲ್ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದರಿಂದ
ದೇಶದ ಶೇ.20 ರಷ್ಟು ತೈಲ ಆಮದು ಕಡಿಮೆಯಾಗಲಿದೆ. ಆರ್ಥಿಕ ಹೊರೆ ಕಡಿಮೆಯಾಗಿ, ಸ್ವಚ್ಛ ಇಂಧನದ ಉತ್ಪಾದನೆಯೂ ಸಾಧ್ಯವಾಗುತ್ತದೆ. ನರೇಂದ್ರ ಮೋದಿಯವರ ನಾಯಕತ್ವದ ಸರ್ಕಾರದಲ್ಲಿ ಇಷ್ಟು ಸಾಧನೆ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಈ ವೇಳೆ ಸಚಿವರಾದ ಶಿವರಾಂ ಹೆಬ್ಬಾರ್, ಮುರುಗೇಶ್ ನಿರಾಣಿ, ಆರ್.ಅಶೋಕ್, ಬಿ.ಎ. ಬಸವರಾಜ, ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications