Breaking; ಚಳಗೇರಿ ತಲುಪಿದ ನವೀನ್ ಮೃತದೇಹ
ಹಾವೇರಿ, ಮಾರ್ಚ್ 21; ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹ ಹಾವೇರಿ ಜಿಲ್ಲೆಯ ಚಳಗೇರಿ ತಲುಪಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸೋಮವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವೀನ್ ಮೃತ ದೇಹ ಆಗಮಿಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರರು ಅಂತಿಮ ನಮನ ಸಲ್ಲಿಸಿದ ಬಳಿಕ ಹಾವೇರಿಗೆ ಕಳಿಸಿಕೊಡಲಾಯಿತು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚಳಗೇರಿ ಗ್ರಾಮಕ್ಕೆ ನವೀನ್ ಮೃತದೇಹ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಕುಟುಂಬದವರು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.
Recommended Video

ಬಳಿಕ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಲವು ಸಚಿವರು ನವೀನ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಕೆ ಮಾಡಲು ಆಗಮಿಸಲಿದ್ದಾರೆ.
ಮುಖ್ಯಮಂತ್ರಿಗಳ ಮಾತು; ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೀನ್ ಮೃತದೇಹ ಬರಮಾಡಿಕೊಂಡು ಅಂತಿಮ ನಮನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲ್ಲಿಸಿದರು. ಬಳಿಕ ಮಾತನಾಡದ ಅವರು, "ಉಕ್ರೇನ್‌ನಿಂದ ನವೀನ್ ಮೃತ ದೇಹವನ್ನು ತರುವ ಅಸಾಧ್ಯವಾದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರ ಭಗೀರಥ ಪ್ರಯತ್ನದಿಂದ ಸಾಧಿಸಿ, ಐತಿಹಾಸಿಕ ಕೆಲಸವನ್ನು ಮಾಡಲಾಗಿದೆ" ಎಂದು ಹೇಳಿದರು.
"ಉಕ್ರೇನ್ ಸುತ್ತಲಿನ ಎಲ್ಲಾ ದೇಶಗಳ ಸಂಪರ್ಕವನ್ನು ಬೆಳೆಸಿ ರಾಜತಾಂತ್ರಿಕವಾಗಿ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಅನುಮತಿ ಪಡೆದು ಕರೆತರಲಾಗಿದೆ. ಇಡೀ ಪ್ರಕ್ರಿಯೆ ಸಮನ್ವಯದ ಆಧಾರದ ಮೇಲೆಯೇ ಆಗಿದೆ. ನವೀನ್ ವೈದ್ಯಕೀಯ ಶಿಕ್ಷಣ ಮುಗಿಸಿ ಹಿಂದಿರುಗುವ ವೇಳೆಗೆ ಅವನ ತಂದೆತಾಯಿಗಳು ಬರಮಾಡಿಕೊಳ್ಳಬೇಕಿತ್ತು. ಆದರೆ ನವೀನ್ ಮೃತದೇಹವನ್ನು ಬರಮಾಡಿಕೊಳ್ಳಬೇಕಿರುವುದು ಅತ್ಯಂತ ನೋವಿನ ಸಂಗತಿ" ಎಂದರು.
"ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಯುದ್ಧ ಭೂಮಿಯಿಂದಲೂ ಹಲವಾರು ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ. ದುರ್ದೈವವಶಾತ್ ನವೀನ್ ಮಿಸೈಲಿನ ಮೆಟಲ್ ಬಡಿದು ತೀರಿಹೋಗಿದ್ದಾನೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕುಟುಂಬವನ್ನು ಸಂಪರ್ಕಿಸಿ ಧೈರ್ಯ ಹೇಳಿದ್ದರು" ಎಂದು ಹೇಳಿದರು.
"ಅಂತ್ಯಕ್ರಿಯೆಗೆಂದೇ ಇರುವ Funeral Agents ಸಂಪರ್ಕಿಸಿ, ದೇಹವನ್ನು ಪಡೆಯಲಾಗಿತು. ನಂತರ ಎಂಬಾಮಿಂಗ್ (embalming) ಮಾಡಲು ಸಾಧ್ಯವಾಯಿತು. ಶವಾಗಾರದ ಬಳಿ ಇನ್ನೂ ಶೇಲ್ಲಿಂಗ್ ನಡೆಯುತ್ತಿದ್ದರೂ ಅಲ್ಲಿಂದ ವಾರ್ಸೊವಾಕ್ಕೆ ತಂದು ಅಲ್ಲಿ ಪುನಃ ಜಿಂಕ್ ಕೋಟಿಂಗ್ ಮಾಡಿ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತರಲಾಗಿದೆ. ಪ್ರಧಾನ ಮಂತ್ರಿಗಳಿಗೆ ಈಗಾಗಲೇ ಧನ್ಯವಾದಗಳನ್ನು ಹೇಳಲಾಗಿದೆ. ಅಸಾಧ್ಯವಾಗಿರುವ ಕೆಲಸವನ್ನು ಅವರ ಭಗೀರಥ ಪ್ರಯತ್ನದಿಂದ ಸಾಧ್ಯವಾಗಿದೆ. ಕನ್ನಡಿಗರ ಪರವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾವೇರಿಗೆ ಹೊರಟ ಮುಖ್ಯಮಂತ್ರಿಗಳು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ಹಾವೇರಿಗೆ ಹೊರಟಿದ್ದಾರೆ. ಬೆಳಗ್ಗೆ 10.15 ಕ್ಕೆ ದಾವಣಗೆರೆ ಜಿ.ಎಂ.ಐ.ಟಿ.ಹೆಲಿಪ್ಯಾಡ್‌ಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, 10.25 ಕ್ಕೆ ರಾಣಿಬೆನ್ನೂರು ತಾಲ್ಲೂಕು ಚಳಗೇರಿಗೆ ತಲುಪಲಿದ್ದಾರೆ.
ಚಳಗೇರಿ ಗ್ರಾಮದಲ್ಲಿ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲಿದ್ದಾರೆ.
ನಂತರ ಚಳಗೇರಿಯಿಂದ ಬೆಳಗ್ಗೆ 11.30ಕ್ಕೆ ಹೊರಟು 11.50ಕ್ಕೆ ಜಿ.ಎಂ.ಐ.ಟಿ ಹೆಲಿಪ್ಯಾಡ್ ತಲುಪಿ ಮಧ್ಯಾಹ್ನ 12ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.












Click it and Unblock the Notifications