Neharu Olekar: ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ರಾಜೀನಾಮೆಗೆ ಶಾಸಕರ ನಿರ್ಧಾರ: ಸಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ಓಲೇಕಾರ್
ಹಾವೇರಿ, ಏಪ್ರಿಲ್ 13: ಕರ್ನಾಟಕ ರಾಜ್ಯ ವಿಧಾನಸಭೆಗೆ ಅಭ್ಯರ್ಥಿಗಳ ಎರಡು ಪಟ್ಟಿ ಘೋಷಿಸಿದ್ದ ಬಿಜೆಪಿಗೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಿದೆ. ಟಿಕೆಟ್ ಸಿಗದ ನಾಯಕರು ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಲ್ಲರದೇ ರಾಜೀನಾಮೆ ಘೋಷಿಸಿದ್ದಾರೆ. ಈ ಪರಂಪರೆಯು ಇದೀಗ ಹಾವೇರಿಗೆ ತಟ್ಟಿದೆ.
ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ರಾಮಸ್ವಾಮಿ ಬೆನ್ನಲ್ಲೆ ಸದ್ಯ ಬಿಜೆಪಿಯ ಎರಡು ಪಟ್ಟಿಯಲ್ಲಿಯೂ ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಗೊಂಡಿದ್ದ ಹಾವೇರಿಯ ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಕ್ಷೇತ್ರವಾದ ಹಾವೇರಿ ನೆಹರು ಓಲೇಕಾರ್ ಈ ಬಗ್ಗೆ ಮಾತನಾಡಿದ್ದಾರೆ.

ಹಾವೇರಿ ಯಲ್ಲಿ ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಜೆಪಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಇದೇ ವೇಳೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಆಘಾತ ನೀಡಿದ್ದಾರೆ.
ಅಷ್ಟೇ ಅಲ್ಲದೇ 100 ಬೆಂಬಲಿಗರು ಕಾರ್ಯಕರ್ತರು ನನ್ನೊಂದಿಗೆ ರಾಜೀನಾಮೆ ನೀಡುತ್ತಾರೆ. ಈಗಾಗಲೇ ಜೆಡಿಎಸ್‌ನಿಂದ ಆಹ್ವಾನ ಬಂದಿದೆ. ಅದರ ಬಗ್ಗೆ ನಂತರಲ್ಲಿ ತೀರ್ಮಾನಿಸುವುದಾಗಿ ಅವರು ಹೇಳಿದರು.
ಸಿಎಂ ಬೊಮ್ಮಾಯಿ ವಿರುದ್ಧ ನಾಲಿಗೆ ಹರಿಬಿಟ್ಟ ಶಾಸಕರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 40ಪರ್ಸೆಂಟ್ ಕಮಿಷನ್ ಏಜೆಂಟ್. ಬೊಮ್ಮಾಯಿಂದ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡತ ಬಿದ್ದಿದೆ. ಯಾರಿಂದ ತನಗೆ ಅನುಕೂಲ ಆಗುತ್ತದೋ ಅವರಿಗೆ ಟಿಕೆಟ್ ಕೊಡಿಸಿದ್ದಾನೆ ಎಂದು ಏಕವಚನದಲ್ಲೇ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ಓಲೇಕಾರ್ ನಡೆಸಿದರು.

ಹಾವೇರಿಯ ಟಿಕೆಟ್ ನನಗೆ ತಪ್ಪಿಸುವ ಸಲುವಾಗಿ ಸಾಕಷ್ಟು ಹುನ್ನಾರ ನಡೆದಿದೆ. ತಮ್ಮ ಕೈ ಚೀಲ ಆದವರಿಗೇ ಬೊಮ್ಮಾಯಿ ಟಿಕೆಟ್ ಕೊಡಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.
ಬಸವರಾಜ ಬೊಮ್ಮಾಯಿ ಬಿಜೆಪಿ ಪಕ್ಷವನ್ನು ಹಾಳು ಮಾಡುತ್ತಾನೆ ಹೊರತು ಉದ್ಧಾರ ಮಾಡಲ್ಲ. ಅವನ ಶಿಗ್ಗಾವಿ ಕ್ಷೇತ್ರದಲ್ಲಿ ನೀರಾವರಿಗೆಂದು 1,500 ಕೋಟಿ ರೂಪಾಯಿ ಖರ್ಚು ಮಾಡಿದ ಯೋಜನೆ ಸಂಪೂರ್ಣ ಹಾಳಾಗಿದೆ. ಇದು ಅವರ ಭ್ರಷ್ಟಾಚಾರ ಸರ್ಕಾರದ ಸಾಧನೆ. ಇಂಥ ಭಷ್ಟರನ್ನು ಕಡೆಗಾಣಿಸಬೇಕು. ಈ ಬಗ್ಗೆ ದೆಹಲಿ ನಾಯಕರು ಕೂಡಲೇ ಆಲೋಚನೆ ಮಾಡಬೇಕು. ಭ್ರಷ್ಟಾಚಾರ ಮಾಡಿದ ದಾಖಲೆ ಬಿಡುಗಡೆ ಮಾಡಿಸುತ್ತೇನೆ ಎಂದು ಅವರು ಇದೇ ವೇಳೆ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.
ಹಾವೇರಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದ್ದೇಕೆ
ಹಾವೇರಿ ಶಾಸಕರು ಇತ್ತೀಚೆಗೆ ಸುಮಾರು 50 ಲಕ್ಷ ರೂಪಾಯಿಯ ಕಾಮಗಾರಿಯನ್ನು ತಮ್ಮ ಮಕ್ಕಳಿಗೇ ಕೊಡಿಸಿದ್ದರು. ಇದು ಸಾಬೀತಾಗಿದ್ದರಿಂದ ಶಾಸಕರು ಮತ್ತವರ ಮಕ್ಕಳ ವಿರುದ್ಧ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಅಲ್ಲದೇ ಹಾವೇರಿ ಕ್ಷೇತ್ರದಲ್ಲಿ ಅವರಿಂದ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳೇನು ಕಡಿಮೆ ಆಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಈ ಬಾರಿ ಪಕ್ಷದ ಹಿತದೃಷ್ಟಿಯಿಂದ ಅಪರಾಧ ಹಿನ್ನೆಲೆಯುಳ್ಳವರಿಗೆ ಟಿಕೆಟ್ ನೀಡಿಲ್ಲ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಮಂತ್ರಿಗಿರಿ ಸ್ಥಾನಕ್ಕೆ ಆಸೆಪಟ್ಟಿದ್ದ ನೆಹರು ಓಲೇಕಾರ್ ಅವರಿಗೆ ಅದು ಸಿಕ್ಕಿರಲಿಲ್ಲ. ಹೀಗಾಗಿ 2021ರ ಹಾನಗಲ್ ಉಪಚುನಾವಣೆ ವೇಳೆ ಅವರು ಮುನಿಸಿಕೊಂಡು ಪ್ರಚಾರಕ್ಕೆ ಹೋಗಿರಲಿಲ್ಲ. ಅವರ ಹಠದ ಸ್ವಭಾವದಿಂದ ಮುಖ್ಯಮಂತ್ರಿಗಳು ಜೊತೆಗೆ ಸರಿ ಇರಲಿಲ್ಲ ಎಂದು ಪಕ್ಷದ ಸ್ಥಳಿಯ ಮುಖಂಡರು ತಿಳಿಸಿದ್ದಾರೆ. ಇದೆಲ್ಲ ಕಾರಣದಿಂದ ಅವರಿಗೆ ಟಿಕೆಟ್ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ.
ಹಾವೇರಿ ಟಿಕೆಟ್ ಕೈತಪ್ಪುತ್ತಿದ್ದಂತೆ ಮುಖ್ಯಮಂತ್ರಿಗಳ ವಿರುದ್ಧ 1500 ಕೋಟಿ ರೂ. ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಅದರ ಬೆನ್ನಲ್ಲೆ ಇದೀಗ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.












Click it and Unblock the Notifications