ಶಿಗ್ಗಾವಿಯಲ್ಲಿ 8 ಕೋಟಿ ರೂ. ವೆಚ್ಚದ ನೂತನ ಬಸ್ ಘಟಕಕ್ಕೆ ಶಂಕುಸ್ಥಾಪನೆ
ಹಾವೇರಿ, ಡಿಸೆಂಬರ್, 04: ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನೂತನ ಬಸ್ ಘಟಕ, ಚಾಲನಾ ಹಾಗೂ ಮೆಕ್ಯಾನಿಕ್ ತರಬೇತಿ ಕೇಂದ್ರದ ಶಂಕುಸ್ಥಾಪನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಿದರು. 20 ಕೋಟಿ ರೂಪಾಯಿ ವೆಚ್ಚದ ಚಾಲನಾ ಮತ್ತು ಮೆಕ್ಯಾನಿಕಲ್ ತರಬೇತಿ ಕೇಂದ್ರ ಹಾಗೂ 8 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಬಸ್ ಘಟಕದ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಇನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ಐಟಿಐ ಕಾಲೇಜು ಪ್ರಾರಂಭ ಆಗಿದ್ದು, ಇದರಿಂದ ಯುವಕರಿಗೆ ಉದ್ಯೋಗ ಅವಕಾಶ ಸಹ ಲಭ್ಯವಾಗುತ್ತಿದೆ. ಅಲ್ಲದೇ ಶಿಗ್ಗಾವಿ ತಾಲೂಕಿಗೆ ಜಿಟಿಟಿಟಿ ಪ್ರಾರಂಭವಾಗಲಿದೆ. ಜೆಸಿಬಿ ಕಂಪನಿಯ ತರಬೇತಿ ಕೇಂದ್ರ ತರುವ ಪಯತ್ನವೂ ನಡೆಯುತ್ತಿದೆ. ಆಟೋಮೊಬೈಲ್ ಕ್ಷೇತ್ರದ ಕಂಪನಿ, ಯಥೀನಾಲ್ ತಯಾರಿಸುವ ಕಾರ್ಖಾನೆ, ಟೆಕ್ಸ್‌ಟೈಲ್ಸ್ ಪಾರ್ಕ್ ಸಹ ನಿರ್ಮಾಣವಾಗಿ ಉದ್ಯೋಗ ಅವಕಾಶ ಸಿಗಲಿವೆ. ಅಲ್ಲದೇ ಹೊಸ ಯೋಜನೆ ಪ್ರಾರಂಭಿಸಲು ನಿರ್ಧರಿಸಿದ್ದು, ಶಾಲಾ ಶಿಕ್ಷಕರು, ಮಕ್ಕಳಿಗೆ ಅನೂಕುಲವಾಗುವ ದೃಷ್ಟಿಯಿಂದ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಖಾಸಗಿ ಸಹಭಾಗಿತ್ವದ ಜೊತೆ ನಮ್ಮ ಶಿಗ್ಗಾವಿ ತಾಲೂಕಿನಿಂದಲೇ ಪೈಲಟ್ ಪ್ರೊಜೆಕ್ಟ್ ಪ್ರಾರಂಭಿಸಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.
ಶಿಗ್ಗಾವಿಯ ಸಾರ್ವಜನಿಕ ಆಸ್ಪತ್ರೆಯನ್ನು ಮೆಲ್ದರ್ಜೆಗೇರಿಸಲು ನಿರ್ಧಾರ: ಸಿಎಂ ಭರವಸೆ
ಈ ವೇಳೆ ಜಿಲ್ಲಾ ಉಸ್ತವಾರಿ ಸಚಿವ ಶಿವರಾಮ್ ಹೆಬ್ಬಾರ್, ಎಂಎಲ್‌ಸಿ ಎಸ್.ವಿ ಸಂಕನೂರು ಹಾಗೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಭಾಗಿಯಾಗಿದ್ದರು.
250 ಹಾಸಿಗಗಳು ಮೇಲ್ದರ್ಜೆಗೆ
ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಭಾಗವಾರು 14 ಜನ ವೈದ್ಯರಿದ್ದು, ಜನಸಂಖ್ಯೆ ಹೆಚ್ಚಾಗಿರುವ ಕಾರಣ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಹಾವೆರಿ ಜಿಲ್ಲೆಯಲ್ಲಿ ಪ್ರವಾಸ ಕೈಂಡಿರುವ ಬಸವರಾಜ ಬೊಮ್ಮಯಿ ಅವರು ಶಿಗ್ಗಾವಿಗೆ ಭೇಟಿ ನೀಡಿದ್ದರು. ಹಾಗೆಯೇ ಶಿಗ್ಗಾವಿಯಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 250 ಹಾಸಿಗಗಳವರೆಗೂ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಐಸಿಯು, ಎನ್‌ಐಸಿಯು ಬೆಡ್‌ಗಳು ಮತ್ತು ಆಪರೇಷನ್ ಥಿಯೇಟರ್, ಡಯಾಲಿಸಿಸ್ ಯುನಿಟ್ ವ್ಯವಸ್ಥೆಯೂ ಇರಲಿದೆ. ಜಿಲ್ಲಾಸ್ಪತ್ರೆಯ ಸರಿಸಮವಾಗಿ ಇಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪಿಹೆಚ್‌ಸಿಗಳನ್ನು ಮೇಲ್ದರ್ಜೆಗೇರಿಸುವ ಭರವಸೆ
ಪಿಹೆಚ್‌ಸಿಗಳ ಮೇಲ್ದರ್ಜೆಗೆ ನಿರ್ಧಾರ ಹೃದ್ರೋಗ ಹಾಗೂ ಮೂತ್ರಪಿಂಡ ಕಾಯಿಲೆಗಳನ್ನು ಹೊರತುಪಡಿಸಿ ಎಲ್ಲಾ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ನೀಡುವಂತೆ ವ್ಯವಸ್ಥೆಯನ್ನು ಮಾಡಲಾಗುತ್ತದೆ. ರಾಜ್ಯದಲ್ಲಿ 100 ಪಿ.ಹೆಚ್.ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. 60 ಕ್ಕಿಂತ ಹೆಚ್ಚು ಹೊಸ ಪಿ.ಹೆಚ್.ಸಿಗಳನ್ನು ಪ್ರಾರಂಭಿಸಲಾಗುತ್ತಿದೆ. ಜೊತೆಗೆ ಡಿಸೆಂಬರ್‌ಲ್ಲಿ ರಾಜ್ಯಾದ್ಯಂತ 437 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭ ಮಾಡುತ್ತೇವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ನಮ್ಮ ಕ್ಲೀನಿಕ್‌ಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು. ಜನರ ಸಮಸ್ಯೆ ಅರ್ಥ ಮಾಡಿಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಹಾಗಾಗಿ 1 ಕೋಟಿಗಿಂತ ಹೆಚ್ಚು ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಿದ್ದೇವೆ. ಹುಬ್ಬಳ್ಳಿಯಲ್ಲಿ 360 ಕೋಟಿ ರೂಪಾಯಿ ವೆಚ್ಚದಲ್ಲಿ ಜಯದೇವ ಇನ್ಸ್‌ಟಿಟ್ಯೂಷನ್ ಪ್ರಾರಂಭ ಮಾಡಲಿದ್ದೇವೆ. ಇನ್ನು ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಅತಿ ವೇಗವಾಗಿ ನಿರ್ಮಾಣ ಆಗಿದ್ದು, ಈ ವರ್ಷವೇ ಅಡ್ಮಿಷನ್ ಕೂಡ ಪ್ರಾರಂಭವಾಗಿದೆ. ಫೆಬ್ರವರಿ ಅಥವಾ ಮಾರ್ಚ್ ಒಳಗಡೆ ಹೊಸ ಕಟ್ಟಡದಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಲಿದೆ. ಅಲ್ಲಿಯೂ ಕೂಡ ಹೊಸ ಆಸ್ಪತ್ರೆ ನಿರ್ಮಾಣ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.