ಹಾವೇರಿ: ಪಿಗ್ಮಿ ಕಲೆಕ್ಟರ್, ಬಟ್ಟೆ ವ್ಯಾಪಾರಿಗೆ ಕೊರೊನಾವೈರಸ್ ಸೋಂಕು
ಹಾವೇರಿ, ಜೂನ್ 23: ಹಾವೇರಿ ಜಿಲ್ಲೆಯಲ್ಲಿ ಇಂದು ಪಿಗ್ಮಿ ಕಲೆಕ್ಟರ್ ಮತ್ತು ಬಟ್ಟೆ ವ್ಯಾಪಾರಿಗೆ ಮಹಾಮಾರಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.
Recommended Video
ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಜಯನಗರ ನಿವಾಸಿಯಾಗಿರುವ ಪಿಗ್ಮಿ ಕಲೆಕ್ಟರ್ ಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಹಾವೇರಿ ಜಿಲ್ಲಾಡಳಿತವು ಆತ ವಾಸವಾಗಿದ್ದ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶಕ್ಕೆ ಅಪರ ಜಿಲ್ಲಾಧಿಕಾರಿ ಯೊಗೇಶ್ವರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಮಾರುತಿ ನಗರದ ನಿವಾಸಿಯಾಗಿರುವ ಬಟ್ಟೆ ವ್ಯಾಪಾರಿಗೂ ಕೊರೊನಾ ವೈರಸ್ ವಕ್ಕರಿಸಿದೆ. ನಗರದ ತಳವಾರ ಓಣಿ ಬಳಿ ಇರುವ ಬಟ್ಟೆ ಅಂಗಡಿ ಮತ್ತು ಸೋಂಕಿತನ ಮನೆ ಇರುವ ಮಾರುತಿ ನಗರ ಮತ್ತು ಆತ ಚಿಕಿತ್ಸೆ ಪಡೆದುಕೊಂಡಿದ್ದ ಅಶೋಕ ನಗರದಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ಇಬ್ಬರಿಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವುದನ್ನು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಖಚಿತಪಡಿಸಿದ್ದಾರೆ. ಈ ಇಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದು, ಜಿಲ್ಲೆಯ ಜನರು ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications