ಶಿಗ್ಗಾವಿ: ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದೇನೆ: ಜನರಿಗೆ ಸಿಎಂ ಬೊಮ್ಮಾಯಿ ನೀಡಿದ ಭರವಸೆ ಏನು?
ಹಾವೇರಿ, ಏಪ್ರಿಲ್ 27: ಶಿಗ್ಗಾವಿ ಕ್ಷೇತ್ರ ಜನರು ಮೂರು ಬಾರಿ ಆಶೀರ್ವದಿಸಿದ್ದೀರಿ. ಅದರ ಪ್ರತಿಯಾಗಿ ನಾನು ಶಾಸಕನಾಗಿ, ಮಂತ್ರಿಯಾಗಿ, ಈಗ ಮುಖ್ಯಮಂತ್ರಿಯೂ ಆಗಿದ್ದೇನೆ. ನನ್ನ ಅಧಿಕಾರವನ್ನು ಕಿಂಚಿತ್ತೂ ಸ್ವಂತಕ್ಕೆ ಬಳಸಿಕೊಂಡಿಲ್ಲ. ಕಪ್ಪು ಚುಕ್ಕೆ ಬರದಂತೆ ಆಡಳಿತ ನಡೆಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಸ್ವಕ್ಷೇತ್ರ ಶಿಗ್ಗಾವಿಯ ಧುಂಡಸಿ, ಹೊಸೂರ, ಎತ್ತಿನಹಳ್ಳಿ, ಕೋಣನಕೇರಿ, ಅಂದಲಗಿ, ಬೊಮ್ಮನಹಳ್ಳಿ, ಹೋತನಹಳ್ಳಿ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದರು. ಇಡೀ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳು ಅತ್ಯಂತ ಪ್ರೀತಿ ವಿಶ್ವಾಸದಿಂದ ಇದ್ದಾರೆ. ಈ ಸಾಮರಸ್ಯ ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಈ ಚುನಾವಣೆಗೆ ನಿಮ್ಮೆಲ್ಲರ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದು ಧನ್ಯವಾದ ಅರ್ಪಿಸಿದರು.

ಚುನಾವಣೆಯಲ್ಲಿ ಅಭಿವೃದ್ಧಿಗೆ ಮತ ಹಾಕಿ. ನಮ್ಮ ನಿಮ್ಮ ಸಂಬಂಧ ರಾಜಕೀಯವನ್ನೂ ಮೀರಿದ ಸಂಬಂಧ. ನಿಮ್ಮ ಪ್ರೀತಿ ವಿಶ್ವಾಸದಲ್ಲಿ ಕೆಲಸ ಮಾಡಿ ಎಲ್ಲರೂ ಮತ ಹಾಕಿದರೆ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಿ ನಿಮ್ಮ ಸೇವೆಯನ್ನು ನಿರಂತರವಾಗಿ ಮಾಡುತ್ತೇನೆ. ನಾನು ರಾಜ್ಯಕ್ಕೆ ಸಿಎಂ ಆಗಿದ್ದರೂ, ಇಲ್ಲಿ ಮಾತ್ರ ನಿಮ್ಮ ಬಸವರಾಜ ಬೊಮ್ಮಾಯಿ ಎಂದರು.
ಗುಲಗಂಜಿಯಷ್ಟೂ ದಕ್ಕೆ ಆಗದಂತೆ ನಡೆದುಕೊಳ್ಳುವೆ: ಸಿಎಂ
ಕ್ಷೇತ್ರದ ಜನರ ವಿಶ್ವಾಸಕ್ಕೆ ಧಕ್ಕೆ ಆಗದಂತೆ ನೀವು ಅಭಿಮಾನ ಪಡುವಂತೆ, ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದಂತೆ ನಾನು ರಾಜ್ಯದಲ್ಲಿ ನ್ಯಾಯ ಸಮ್ಮತ ಆಡಳಿತ ಮಾಡಿದ್ದೇನೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಪ್ರಧಾನಿಯವರು ರಾಜ್ಯಕ್ಕೆ ಬಂದ ಮೇಲೆ ಇನ್ನಷ್ಟು ಹೆಚ್ಚಿನ ಬೆಂಬಲ ದೊರೆಯಲಿದೆ. ನೀವು ನನ್ನನ್ನು ದೊಡ್ಡ ಪ್ರಮಾಣದಲ್ಲಿ ಆಯ್ಕೆ ಮಾಡಿದರೆ ನನ್ನನ್ನು ಪಕ್ಷ ಸಿಎಂ ಮಾಡಿದ್ದಕ್ಕೂ ಸಾರ್ಥಕ ಆಗುತ್ತದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಆದ ನಂತರ ಮಕ್ಕಳು ಶಿಕ್ಷಿತರಾಗಲು ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಕೂಲಿ ಕಾರ್ಮಿಕರ ಮಕ್ಕಳಿಗೂ ಈ ಯೋಜನೆ, ರೈತರಿಗೆ ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದ 54 ಲಕ್ಷ ರೈತರಿಗೆ ನೇರವಾಗಿ ಡಿಬಿಟಿ ಮೂಲಕ ಸಹಾಯಧನ ನೀಡಲಾಗಿದೆ.

ಕಾಂಗ್ರೆಸ್‌ನಿಂದ ಅಭಿವೃದ್ಧಿ ಅಸಾಧ್ಯ
ಪ್ರವಾಹದಿಂದ ಮನೆ ಕಳೆದುಕೊಂಡವರ ತಾಲ್ಲೂಕಿನ 6000 ಮನೆಗಳಿಗೆ ಪರಿಹಾರ ನೀಡಲಾಗಿದೆ. ದಾಖಲೆ ಪ್ರಮಾಣದಲ್ಲಿ ಬೆಳೆ ವಿಮಾ ಪರಿಹಾರ ಬಂದಿದೆ. ನನ್ನ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ನನ್ನ ಕ್ಷೇತ್ರದ 15 ಪಿಯುಸಿ ಕಾಲೇಜು ಮಂಜೂರಾಗಿದೆ. ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದೇವೆ ಇನ್ನು ಏಳೆಂಟು ತಿಂಗಳಲ್ಲಿ ಧುಂಡಸಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಯಾವೊಂದು ಸಮುದಾಯಗಳಿಗೆ ಬೇಧ ಭಾವ ಮಾಡದೇ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದಿದ್ದರೆ ಇಷ್ಟೊಂದು ಅಭಿವೃದ್ಧಿ ಆಗುತ್ತಿರಲಿಲ್ಲ. ಅವರು ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ಹೊಟ್ಟೆ ಬೇಯಿಸಿಕೊಂಡು ಹೋಗುತ್ತಿದ್ದರು ಎಂದು ಅವರು ವಾಗ್ದಾಳಿ ನಡೆಸಿದರು.












Click it and Unblock the Notifications