ಬಿಜೆಪಿಯ ಅಭಿವೃದ್ಧಿ-ಕಾಂಗ್ರೆಸ್‌ನ ಒಡೆದು ಆಳುವ ನೀತಿ ಮಧ್ಯೆ ಚುನಾವಣೆ ಎದುರಾಗಿದೆ: ಬೊಮ್ಮಾಯಿ
ಹಾವೇರಿ, ಮೇ 08: ಪ್ರಸ್ತುತ 2023ರ ರಾಜ್ಯ ವಿಧಾನಸಭಾ ಚುನಾವಣೆಯು ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ನ ಒಡೆದು ಆಳುವ ನೀತಿಯ ನಡುವೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಕೊನೆಯ ದಿನ ಪ್ರಚಾರ ನಡೆಸಿದ ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿ ಚುನಾವಣೆಯನ್ನು ನಾವು ಯಾರು ಮಾಡುತ್ತಿಲ್ಲ. ಜನರೇ ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಇದೆ. ವಿಶೇಷವಾಗಿ ತಾಯಂದಿರ ಉತ್ಸಾಹ, ಬೆಂಬಲ ನೋಡಿದರೆ ಯಾವುದೋ ಜನ್ಮದ ಪುಣ್ಯ ಅಂದುಕೊಂಡಿದ್ದೇನೆ ಎಂದು ಅವರು ಅಭಿಪ್ರಾಯಪಟ್ಟರು.

2018 ರಲ್ಲಿ ನೀವು ಕೊಟ್ಟಿರುವ ಮತದ ಶಕ್ತಿ ಬಹಳ ದೊಡ್ಡದಿದೆ. ನಿಮ್ಮಿಂದಲೇ ನಾನು ಶಾಸಕನಾಗಿ, ಮಂತ್ರಿಯಾಗಿ ಇದೀಗ ಮುಖ್ಯಮಂತ್ರಿಯಾಗಿ ಸಹ ಆಡಳಿತ ನಡೆಸಿದ್ದೇನೆ. ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ನ ಒಡೆದು ಆಳುವ ನೀತಿಯ ನಡೆದಿದೆ. ಸಮ್ಮಿಶ್ರ ಸರ್ಕಾರ ಯಾವುದೇ ರೀತಿಯ ಕೆಲಸ ಮಾಡಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ ಎಂದು ಹೇಳಿದರು.
ಬಿಜೆಪಿಗೆ ಗೆಲುವು ನಿಶ್ಚಿತ
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎದುರಾಗಿ ಕೋವಿಡ್ ಪಿಡುಗನ್ನು ನಾವು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡಿದ್ದೇವೆ. ಈ ಬಾರಿ ಎಲ್ಲ ಥರದ ಮನೆ ನಿರ್ಮಾಣಕ್ಕೂ ಐದು ಲಕ್ಷ ರೂ ಅನುದಾನ ನೀಡಲಾಗುವುದು. ನನ್ನ ಕ್ಷೇತ್ರದಲ್ಲಿ ಸುಮಾರು 300 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಐಟಿಐ ನಿರ್ಮಾಣ ಮಾಡಿದ್ದೆನೆ ಎಂದು ತಿಳಿಸಿದರು.
ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ ಎಂದು ಸಿಎಂ ಮನವಿ ಮಾಡಿದರು.

ಲಿಂಗಾಯತ ವೇದಿಕೆ ಕಾಲ್ಪನಿಕ ಸಂಘಟನೆ: ಸಿಎಂ
ಲಿಂಗಾಯತ ವೇದಿಕೆ ಎಂಬದು ಎಲ್ಲಿಯೂ ಇಲ್ಲ ಅದೊಂದು ಕಾಲ್ಪನಿಕ ಸಂಘಟನೆಯಾಗಿದೆ. ವೀರಶೈವ ಸಮಾಜ ದೊಡ್ಡದಿದೆ. ಯಾವುದೇ ಸಂಸ್ಥೆಯ ಅಡಿಯಲ್ಲಿ ಇಲ್ಲ. ವೀರಶೈವ ಮಹಾಸಭಾ ಅಧ್ಯಕ್ಷರನ್ನು ಗೌರವಿಸುವುತ್ತೇವೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷಕ್ಕೆ ಸಂಸ್ಥೆಯ ಹೆಸರು ಬಳಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ಹುಬ್ಬಳ್ಳಿಯಲ್ಲಿ ಹೇಳಿದರು.
ನಾಲ್ಕು ಜನ ಸೇರಿ ಏನೇ ಹೇಳಿದರೆ ಅದು ಲಿಂಗಾಯತರ ಧ್ವನಿ ಆಗುತ್ತದೆಯೇ?. ಲಿಂಗಾಯತ ಸಮಾಜ ಸಮುದ್ರ ಇದ್ದಂತೆ.
ಲಿಂಗಾಯತ ವೇದಿಕೆ ಚುನಾವಣೆ ಸಂದರ್ಭಗಳಲ್ಲಿ ಹುಟ್ಟಿಕೊಂಡ ಸಂಘಟನೆ ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications