Savadatti Temple: ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಹರಿದು ಬಂತು ಶತಕೋಟಿ ಅನುದಾನ
ಹಾವೇರಿ, ಮಾರ್ಚ್ 11: ಉತ್ತರ ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಬೆಳಗಾವಿಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಈ ಭಾಗದ ಜನರ ವರ್ಷಗಳ ಬೇಡಿಕೆಯಾಗಿದೆ. ಈಗಾಗಲೇ ರೂಪ್‌ಗೆವೇ ಅಳವಡಿಕೆ ಸೇರಿದಂತೆ ಕೆಲವು ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲು ಮುಂದಾಗಿದೆ. ಕಳೆದ ನವೆಂಬರ್ 2024ರಲ್ಲಿ ಅನುದಾನ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ ಶ್ರೀಕ್ಷೇತ್ರಕ್ಕೆ ಮತ್ತೆ ಅನುದಾನ ನೀಡಿದೆ.
ಮಂಗಳವಾರ ಹಾವೇರಿ ನಗರದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಅವರು, ಪ್ರಧಾನಿಗೆ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಕೇಂದ್ರದ ಪ್ರಸಾದ ಯೋಜನೆ ಅಡಿಯಲ್ಲಿ ಸವದತ್ತಿ ಎಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದ ಈ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಆಧುನಿಕ ಸೌಲಭ್ಯಗಳು ದೊರೆಯುವಂತಾಗಲಿದೆ. ಭಕ್ತರಲ್ಲಿ ದೇವಸ್ಥಾನದ ಬಗ್ಗೆ ಸಕಾರಾತ್ಮಕ ಭಾವನೆ ಮೂಡುವ ವಿಶ್ವಾಸ ಇದೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ ಸವದತ್ತಿ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ನವೆಂಬರ್ ತಿಂಗಳಲ್ಲಿ ಸಹ 100 ಕೋಟಿ ರೂಪಾಯಿ ಇದೇ ಯಲ್ಲಮ್ಮ ದೇವಿ ದೇವಸ್ಥಾನ ನೀಡಲಾಗಿತ್ತು. ಸಂಸದ ಜಗದೀಶ್ ಶೆಟ್ಟರ್ ಮನವಿ ಮಾಡಿದ್ದರು. ಆಗಲೂ ಸರ್ಕಾರ ಕಾಲ ಕಾಲಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿತ್ತು.
ಯಲ್ಲಮ್ಮ ಗುಡ್ಡಕ್ಕೆ ರೈಲ್ವೆ ಸಂಪರ್ಕಕ್ಕೆ ಮನವಿ
ಇದಷ್ಟೇ ಅಲ್ಲದೇ ಸಂಸದ ಜಗದೀಶ್ ಶೆಟ್ಟರ್ ಅವರು ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ಇಲ್ಲಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು. ರೈಲು ಸಾರಿಗೆ ಒದಗಿಸುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಕುರಿತು ಸಭೆ ನಡೆಸಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇತ್ತ ಯಲ್ಲಮ್ಮ ದೇವಿ ಗುಡ್ಡದಲ್ಲಿ ರಾಜ್ಯ ಸರ್ಕಾರ ರೂಪ್ ವೇ ನಿರ್ಮಾಣ ಸೇರಿದಂತೆ ಕೆಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ. ಸರ್ಕಾರಗಳು ಸಂಕಲ್ಪ ಮಾಡಿದ್ದೇ ಆದಲ್ಲಿ, ಎಲ್ಲವು ಅಂದುಕೊಂಡಂತಾದರೆ ಭವಿಷ್ಯದಲ್ಲಿ ಯಲ್ಲಮ್ಮ ದೇವಿ ಕ್ಷೇತ್ರವು ಹೊಸ ರೂಪ ಪಡೆಯುವ ನಿರೀಕ್ಷೆ ಇದೆ.












Click it and Unblock the Notifications