Byadgi APMC Incident: 81 ಮಂದಿ ಬಂಧನ, ಬೈಕ್ ಕಳ್ಳತನ: ಹಾನಿಯ ವಿವರ ಹೀಗಿದೆ
ಹಾವೇರಿ, ಮಾರ್ಚ್ 13: ಹಾವೇರಿ ಜಿಲ್ಲೆಯ ತಾಲೂಕಾಗಿರುವ ಬ್ಯಾಡಗಿ (Byadgi) ಮೆಣಸಿನಕಾಯಿ ಮಾರುಕಟ್ಟೆ (ಎಪಿಎಂಸಿ) ಯಲ್ಲಿ ಮೆಣಸಿನಕಾಯಿ ದರ ದಿಢೀರ್ ಇಳಿಕೆಯಿಂದಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ರೈತರು ಆಕ್ರೋಶಗೊಂಡು ಎಪಿಎಂಸಿ ಕಚೇರಿಗೆ ಹಾನಿ ಮಾಡಿದ್ದರು. ಘಟನೆ ಸಂಬಂಧ ಅನೇಕ ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ರೂ. 5 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಎಪಿಎಂಸಿ ಕಚೇರಿಗೆ ನುಗ್ಗಿದ ರೈತರ ಕುರಿತುತಂತೆ ಒಟ್ಟು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 4 ಹಿಂಸಾಚಾರ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಪೊಲೀಸರು ಸುಮಾರು 80ಕ್ಕೂ ಹೆಚ್ಚಿನ ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುಲಾಗುತ್ತಿದೆ.

ಪ್ರತಿ ಕ್ವಿಂಟಾಲ್ ಒಣ ಮೆಣಸಿನಕಾಯಿ ದರ 20,000 ರೂಪಾಯಿಯಿಂದ ಏಕಾಎಕಿ 8,000 ರೂ.ಗೆ ಕುಸಿತಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮೆಣಸಿನಕಾಯಿ ಬೆಳೆಗಾರರು ಎಪಿಎಂಸಿ ಆಡಳಿತ ಕಚೇರಿಗೆ ನುಗ್ಗಿದರು. ಒಳಗೆ ಪಿಠೋಪಕರಣ ಒಡೆದು ಹಾಕಿ, ಖಡತ ಸುಟ್ಟು ಹಾನಿ ಮಾಡಿದರು. ವರ್ತಕರನ್ನು ಎಳೆದು ಥಳಿಸಿದರು ಎನ್ನಲಾಗಿದೆ.
ಹೊಸ ಕಚೇರಿ ಸುಟ್ಟು ಕರಕಲು: 5 ಕೋಟಿ ರೂ. ಹಾನಿ
ಎರಡು ಕಾರುಗಳಿಗೆ ಬೆಂಕಿ ಹಚ್ಚುವ ಜೊತೆಗೆ ಕಚೇರಿ ಮುಂದೆ ನಿಂತಿದ್ದ ಕಾರನ್ನು ಹಾನಿ ಮಾಡಿದರು. ಕಚೇರಿ ಆವರಣ ಪೂರ್ತಿ ಬೆಂಕಿಯ ಕೆನ್ನಾಲಿಗೆಗೆ ನಾಶವಾಯಿತು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವಿಶ್ವದಲ್ಲೇ ಖ್ಯಾತಿ ಪಡೆದಿತ್ತು, ಇದೀಗ ಈ ಘಟನೆಯಿಂದ ಬ್ಯಾಡಗಿ ಗುರುತಿಸಿಕೊಳ್ಳುವಂತಾಗಿದೆ.

ಬ್ಯಾಡಿಯ ಈ ಎಪಿಎಂಸಿ ಕಟ್ಟಡವನ್ನು ಇತ್ತೀಚೆಗೆ ಕಟ್ಟಲಾಗಿತ್ತು. ಘಟನೆಯಲ್ಲಿ ಕಟ್ಟಡ, ಕೋಟ್ಯಂತರ ಮೌಲ್ಯದ ವಾಹನಗಳು ಸೇರಿದಂತೆ ಕಟಡ ಪ್ರಾಂಗಣ ಬೆಂಕಿಗೆ ಆಹುತಿಯಾಗಿವೆ. ಇದೆಲ್ಲದನ್ನು ಅಂದಾಜು ಮಾಡಲಾಗಿದ್ದು, ಐದು ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಲಾಗಿದೆ.
ಕಾರುಗಳಿಗೆ ಬೆಂಕಿ, ಬೈಕ್‌ಗಳಿಗೆ ಮಾಯ
ಸುಟ್ಟ ವಾಹನಗಳ ಮಾಹಿತಿ ನೋಡುವುದಾದರೆ, ಕಚೇರಿ ಮುಂದೆ ಪಾರ್ಕ್ ಮಾಡಲಾದ 2 ಸ್ಕಾರ್ಪಿಯೊ, 1 ಸ್ವೀಪಿಂಗ್ ಮಿಷನ್, 1 ಅಗ್ನಿಶಾಮಕ ದಳದ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಎಪಿಎಂಸಿ ಸಿಬ್ಬಂದಿ 3 ಬೈಕ್ ಹಾನಿಯಾದರೆ, ಒಟ್ಟು ಮೂರು ಬೈಕ್ ಕಳ್ಳತನಾಗಿದೆ. ಕಚೇರಿಯೊಳಗೆ ರೈತರು ದಾಂಧಲೆ ನಡೆಸಿದ್ದಲ್ಲದೆ ಬೀರುಗಳಲ್ಲಿದ್ದ ಎಲ್ಲಾ ಕಡತಗಳನ್ನು ತೆಗೆದು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ ಎಂದು ಎಪಿಎಂಸಿ ದೂರಿದೆ.

ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 4 ಎಫ್‌ಐಆರ್ ದಾಖಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಕೆಂಪು ಮೆಣಸಿನಕಾಯಿ ಮಾರಾಟಕ್ಕೆ ಬಂದ ಸುಮಾರು 80 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.
ಎಂದಿನಂತೆ ವ್ಯಾಪಾರ ವಹೀವಾಟು
ಘಟನೆ ಮರುದಿನ ಮಂಗಳವಾರ ಬ್ಯಾಡಗಿ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹೀವಾಟು ಆರಂಭವಾಗಿದೆ. ಬೆಳೆಗಾರರಿಂದ ಸುಮಾರು 45ಕ್ಕೂ ಹೆಚ್ಚು ಚೀಲ ಮೆಣಸಿನಕಾಯಿಯನ್ನು ವರ್ತಕರು ಖರೀದಿಸಿದ್ದಾರೆ. ಇತ್ತ ಪೊಲೀಸರು ಕಚೇರಿ ಮುಂದಿನ ವಾಹನ ತಪಾಸಣೆ, ಸಿಸಿ ಟಿವಿ ದೃಶ್ಯ ಪರಿಶೀಲನೆಯಂತಹ ಕಾರ್ಯದಲ್ಲಿ ತೊಡಗಿದ್ದಾರೆ.
ಸ್ಥಳದಲ್ಲಿ ದಾವಣಗೆರೆ ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಲ್ಲದೇ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಪೊಲೀಸ್ ಭದ್ರತೆ ಒದಗಿಸಲಾಗಿದೆ.












Click it and Unblock the Notifications