ಶಿಗ್ಗಾವಿ ಉಪ ಚುನಾವಣೆ ಸೋಲಿನ ಬಳಿಕ ಸಿಎಂ ಸಿದ್ದರಾಮಯ್ಯಗೆ ಬಸವರಾಜ ಬೊಮ್ಮಾಯಿ ಪತ್ರ
ಹಾವೇರಿ, ಡಿಸೆಂಬರ್ 01: ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆ 2024ರಲ್ಲಿ ಬಿಜೆಪಿಗೆ ಸೋಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಾಸಿರ್ ಅಹಮದ್ ಖಾನ್ ಪಠಾಣ್ ಜಯಭೇರಿ ಬಾರಿಸುವ ಮೂಲಕ, ಹಾವೇರಿ ಜಿಲ್ಲೆಯನ್ನು ಬಿಜೆಪಿ ಮುಕ್ತವಾಗಿಸಿದ್ದಾರೆ. ಈ ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ವಾರದ ಬಳಿಕ ಶಿಗ್ಗಾವಿ ಕ್ಷೇತ್ರದ ಮಾಜಿ ಶಾಸಕ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಪತ್ರವೊಂದನ್ನು ಬರೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಉಪ ಚುನಾವಣೆಯಲ್ಲಿ ಅವರು 87,308 ಮತಗಳನ್ನು ಪಡೆದು ಕಾಂಗ್ರೆಸ್‌ನ ಯಾಸಿರ್ ಅಹಮದ್ ಖಾನ್ ಪಠಾಣ್ (100756 ಮತಗಳು) ವಿರುದ್ಧ 13,448 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಈಗ ಹಾವೇರಿ-ಗದಗ ಕ್ಷೇತ್ರದ ಸಂಸದ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರ 300 ಕೋಟಿ ರೂ.ಗಳ ಅನುದಾನದ ಕುರಿತಾಗಿದೆ. 2023ರ ವಿಧಾನಸಭೆ ಚುನಾವಣೆಗೂ ಮೊದಲು ಶಿಗ್ಗಾವಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಅನುದಾನ ತಂದಿದ್ದರು. ಈ ಕುರಿತು ಹಾಲಿ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ನೆನಪಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಪತ್ರದ ವಿವರ: ಸಂಸದ ಬಸವರಾಜ ಬೊಮ್ಮಾಯಿ ಪತ್ರದಲ್ಲಿ ಮಾನ್ಯರೆ, ಈಗ ತಾನೇ ನಡೆದ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯು ಜಯಶಾಲಿಯಾಗಿದ್ದು, ತಮಗೂ ಹಾಗೂ ತಮ್ಮ ಪಕ್ಷಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವಿದ್ದಾಗ ಹಲವಾರು ಯೋಜನೆ ಹಾಗೂ ಕಾಮಗಾರಿಗಳಿಗೆ ಸುಮಾರು ರೂ. 300 ಕೋಟಗಳ ಅನುದಾನವನ್ನು ಮಂಜೂರು ಮಾಡಿದ್ದು, ಅದರಲ್ಲಿ ಕೆಲವೊಂದು ಕಾಮಗಾರಿಗಳು ಸ್ಥಗಿತಗೊಳಿಸಲಾಗಿದ್ದು, ಕೆಲವೊಂದು ಕಾಮಗಾರಿಗಳನ್ನು ರದ್ದು ಮಾಡಲಾಗಿದೆ.
ಈ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನೀರಾವರಿ, ಮುಜರಾಯಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಮತ್ತು ನಿಗಮಗಳಿಂದ ಕೈಗೊಳ್ಳಲಾಗಿತ್ತು.
ಈ ಇಲಾಖೆಗಳಂದ ಕೈಗೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಈಗಾಲಾದರೂ ಇವುಗಳಿಗೆ ಮತ್ತೆ ಚಾಲನೆ ಕೊಟ್ಟು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಪತ್ರದಲ್ಲಿ ತಿಳಿಸಿದ್ದಾರೆ.
ಅದರಲ್ಲಿ ಕೆಲವೊಂದು ಪ್ರಮುಖ ಕಾಮಗಾರಿಗಳ ಸ್ಥಿತಿ ಗತಿಗಳ ವಿವರ ಈ ಕೆಳಗಿನಂತಿವೆ ಎಂದು ತಮ್ಮ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
* 200 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ನಿರ್ಮಾಣ. ಶಿಗ್ಗಾವಿ ತಾಲೂಕು. 96.50 ಕೋಟಿ ಅನುದಾನ, ಬಾಕಿ ಉಳಿದಿರುವ ಅನುದಾನ 27.34 ಕೋಟಿ.
* ವಿವಿಐಪಿ ಅತಿಥಿ ಗೃಹ ನಿರ್ಮಾಣ. ಶಿಗ್ಗಾವಿ ತಾಲೂಕು. 5.30 ಕೋಟಿ ರೂ. ಅನುದಾನ. ಬಾಕಿ ಉಳಿದಿರುವ ಅನುದಾನ 78 ಲಕ್ಷಗಳು.
* ಸರಕಾರಿ ಉಪಕರಣಗಳ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ. ಶಿಗ್ಗಾವಿ ತಾಲೂಕು. 73.75 ಕೋಟಿ ರೂ. ಅನುದಾನ. 50 ಕೋಟಿ (ನಬಾರ್ಡ್) ಅನುದಾನ ಬಾಕಿ.
* ಶೀತಲ ಗೃಹ ನಿರ್ಮಾಣ. ಶಿಗ್ಗಾವಿ ತಾಲೂಕು. 9.83 ಕೋಟಿ ರೂ. ಅನುದಾನ. 6 ಕೋಟಿ ರೂ. ಬಾಕಿ ಉಳಿದಿರುವ ಅನುದಾನ.
* ಟೆಕ್ಸಟೈಲ್ ಪಾರ್ಕ್ ನಿರ್ಮಾಣ. ಶಿಗ್ಗಾವಿ ತಾಲೂಕು. 31.25 ಕೋಟಿ ರೂ. ಅನುದಾನ. ಬಾಕಿ ಇರುವ ಅನುದಾನ 5.50 ಕೋಟಿ ರೂ.ಗಳು.
* ಆಯುರ್ವೇದಿಕ್ ಆಸ್ಪತ್ರೆ ಕಟ್ಟಡ ನಿರ್ಮಾಣ. ಸವಣೂರ ತಾಲೂಕು. 44 ಕೋಟಿ ರೂ. ಅನುದಾನ. ಬಾಕಿ ಉಳಿದಿರುವ ಅನುದಾನ 18.59 ಕೋಟಿ ರೂ.ಗಳು.
ತಾವು ಎರಡನೇ ಭಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ ರಾಜ್ಯ ಭಾರವನ್ನು ಮಾಡುತ್ತಿದ್ದು, ತಮ್ಮ ಅನುಭವದಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಕಾಮಗಾರಿಗಳನ್ನು ಪೂರ್ಣಗೊಳಬೇಕೆಂದು ತಮಗೆ ಹೇಳಬೇಕಾಗಿಲ್ಲ. ಅದರಲ್ಲಿ ವಿಶೇಷವಾಗಿ ಅರ್ಧಕ್ಕಿಂತ ಹೆಚ್ಚು ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಸುವುದು ಅತಿ ಅವಶ್ಯಕತೆಯಿರುತ್ತದೆ.
ಉಪ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ತಾವು ಕೊಟ್ಟ ಮಾತಿನಂತೆ ಮೇಲೆ ಕಾಣಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಶಿಗ್ಗಾವಿ-ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತೀರ ಎಂದು ನಂಬಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications