ಹಾಸನ; ಸುಪಾರಿ ನೀಡಿ ಪತಿ ಕೊಲ್ಲಿಸಿದ್ದ ಪತ್ನಿ ಬಂಧನ!
ಹಾಸನ, ಫೆಬ್ರವರಿ 10; ತಲೆಗೆ ದೊಣ್ಣೆಯಿಂದ ಹೊಡೆದು ಜನವರಿ 31ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲುಹೊಸೂರು ಗ್ರಾಮದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿಯೇ ಪತಿ ಕೊಲೆಗೆ ಸುಪಾರಿ ನೀಡಿದ್ದಳು.
ಕಾವಲುಹೊಸೂರು ಗೇಟ್ ಬಳಿಯಲ್ಲಿ 42 ವರ್ಷದ ಆನಂದ್ ಕುಮಾರ್‌ರನ್ನು ಯಾರೋ ಅಪರಿಚಿತರು ಕೊಲೆ ಮಾಡಿ ಹೋಗಿದ್ದರು. ಇದು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಘಟನೆ ನಡೆದ ದಿನವೇ ಕೊಲೆಯಾದ ವ್ಯಕ್ತಿಯ ಪತ್ನಿಯ ಮೇಲಿದ್ದ ಅನುಮಾನ ಈಗ ನಿಜವಾಗಿದೆ.
ಕೊಲೆ ಪ್ರಕರಣದ ತನಿಖೆ ನಡೆಸಿದ ನುಗ್ಗೇಹಳ್ಳಿ ಪೊಲೀಸರು ಹತ್ಯೆಯ ಹಿಂದಿನ ರಹಸ್ಯ ಹುಡುಕಿದ್ದಾರೆ, ಮಕ್ಕಳನ್ನು ಶಾಲೆಯಿಂದ ಕರೆತರಲು ತೆರಳಿದ್ದಂತ ಆನಂದ್ ಕುಮಾರ್‌ರನ್ನು ಕಾವಲುಹೊಸೂರು ಗೇಟ್ ಬಳಿಯಲ್ಲಿ ಇಬ್ಬರು ಅಪರಿಚಿತರು ಅಡ್ಡಗಟ್ಟಿ, ದೊಣ್ಣೆಯಿಂದ ಹತ್ಯೆಗೈದಿದ್ದರು.

ಈ ಪ್ರಕರಣದ ತನಿಖೆಗೆ ಹಾಸನ ಎಸ್‌ಪಿ ಶ್ರೀನಿವಾಸ ಗೌಡ ವಿಶೇಷ ತಂಡವನ್ನು ರಚನೆ ಮಾಡಿದ್ದರು. ತಂಡವು ವಿವಿಧ ಹಂತಗಳಲ್ಲಿ ವಿಚಾರಣೆ ನಡೆಸಿತ್ತು. ಕೊಲೆಯಾದ ಆನಂದ್ ಕುಮಾರ್ ಪತ್ನಿಯ ಮೇಲೆ ಅನುಮಾನ ಬಂದಿತ್ತು. ಆನಂದ್ ಕುಮಾರ್ ಪತ್ನಿ ಸುನೀತಾ ಬಗ್ಗೆ ಅನುಮಾನ ಮೂಡಲು ಈ ಹಿಂದಿನ ಆಕೆಯ ಹಿಸ್ಟರಿ ಅಲ್ಲದೇ ಕೆಲವು ಸಾಕ್ಷಿಗಳು ಸಹಕಾರಿಯಾದವು.
ಆಕೆಯನ್ನು ವಿಚಾರಣೆಗೆ ಒಳಪಡಿಸಿದರೂ ತಾನು ಪತಿಯ ಕೊಲೆಗೆ ಕಾರಣವಲ್ಲ ಎಂದು ಆಕೆ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಳು. ಪೊಲೀಸರು ತಮ್ಮ ವರಸೆಯಲ್ಲಿ ಸುನೀತಾ ವಿಚಾರಿಸಿದಾಗ, ಹತ್ಯೆಯ ಹಿಂದಿನ ರಹಸ್ಯ ಬಹಿರಂಗವಾಗಿದೆ. ಪ್ರಿಯಕರನಿಗೆ ಪತಿಯನ್ನು ಹತ್ಯೆ ಮಾಡಲು ಸುಪಾರಿ ಕೊಟ್ಟ ಅಂಶ ಬೆಳಕಿಗೆ ಬಂದಿದೆ.
ಅನೈತಿಕ ಸಂಬಂಧ; ಕೊಲೆಯಾದ ಆನಂದ್ ಕುಮಾರ್ ಹಾಗೂ ಸುನೀತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2018ರಲ್ಲಿ ಡ್ರೈವಿಂಗ್ ಕಲಿಯುವ ವಿಚಾರದಲ್ಲಿ ಗಲಾಟೆಯಾಗಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸುನೀತಾ ಇತ್ತೀಚಿಗೆ ಬಿಡುಗಡೆಯಾಗಿದ್ದಳು.
ಕೋವಿಡ್ ಸಮಯದಲ್ಲಿ ಯೋಗಾ ತರಗತಿಗೆ ಹೋಗುತ್ತಿದ್ದ ಸುನೀತಾಗೆ ಅಲ್ಲಿ ನವೀನ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ಇದನ್ನು ಕಣ್ಣಾರೆ ಕಂಡಿದ್ದ ಆನಂದ್ ಕುಮಾರ್ ಆಕ್ಷೇಪಿಸಿದ್ದರು, ಜಗಳವಾಡಿದ್ದರು. ಗಂಡನಿಗೆ ವಿಷಯ ತಿಳಿದ ಹಿನ್ನಲೆ ಹತ್ಯೆಗೆ ಸಂಚು ರೂಪಿಸಲಾಗಿತ್ತು.
ಸುನೀತಾ ಪ್ರಿಯಕರ ನವೀನ್ ಮತ್ತು ಆತನ ಸ್ನೇಹಿತರು ಸೇರಿ ಆನಂದ್ ಕುಮಾರ್ ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀತಾ ಮತ್ತು ಆಕೆಯ ಪ್ರಿಯಕರ ನವೀನ್ ಬಂಧಿಸಿ ಜೈಲು ಸೇರಿಸಿದ್ದಾರೆ.












Click it and Unblock the Notifications