HD Revanna: ಹೈಕೋರ್ಟ್ ಸಮನ್ಸ್ ಬಗ್ಗೆ ಎಚ್.ಡಿ.ರೇವಣ್ಣ ಹೇಳಿದ್ದೇನು?, ಇಲ್ಲಿದೆ ವಿವರ
ಹಾಸನ, ಸೆಪ್ಟೆಂಬರ್, 04: ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಶಾಸಕ ಎಚ್.ಡಿ.ರೇವಣ್ಣಗೂ ಹೈಕೋರ್ಟ್ ಸಮನ್ಸ್ ಜಾರಿಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಈ ವಿಚಾರವಾಗಿ ಎಚ್.ಡಿ.ರೇವಣ್ಣ ಅವರು ಏನು ಹೇಳಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಶಾಸಕ ಹೆಚ್.ಡಿ.ರೇವಣ್ಣ ಸೇರಿದಂತೆ ದೇವರಾಜೇಗೌಡ ವಿರುದ್ಧ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೂ ಸಮನ್ಸ್ ಜಾರಿ ಮಾಡುವಂತೆ ಆದೇಶ ಹೊರಡಿಸಿದೆ.

ವಿಧಾನಸಭೆ ಕಾರ್ಯದರ್ಶಿ ಮೂಲಕ ಸಮನ್ಸ್ ಜಾರಿ ಮಾಡಲು ಹೈಕೋರ್ಟ್ ಆದೇಶ ಹೊರಡಿಸಿದೆ. ಚುನಾವಣಾ ಅಕ್ರಮದ ಮೂಲಕ ಹೆಚ್.ಡಿ.ರೇವಣ್ಣ ಜಯಗಳಿಸಿದ್ದಾರೆ. 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಹಾಗಾಗಿ ಇಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ದೇವರಾಜೇಗೌಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.
ಇನ್ನು ಈ ವಿಚಾರಕ್ಕೆ ಹೊಳೆನರಸೀಪುರದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು, ನನ್ನ ವಿರುದ್ಧ ಎಲೆಕ್ಷನ್ ಸಂಬಂಧ ಯಾರೋ ಕೇಸ್ ಹಾಕಿರಬೇಕು. ನನಗೆ ಇನ್ನೂ ಯಾವುದೇ ನೋಟೀಸ್ ಬಂದಿಲ್ಲ. ಸಿದ್ದರಾಮಯ್ಯರನ್ನೂ ಸೇರಿಸಿ ಕೇಸ್ ಹಾಕಿದ್ದಾರಲ್ಲ. ಹಿಂದೆ ಮಾಜಿ ಮಂತ್ರಿಗಳು ಕೇಸ್ ದಾಖಲಿಸಿದ್ದರು. ಇವಾಗ ಯಾರೋ ಹಾಕಿರುತ್ತಾರೆ ಏನ್ ಮಾಡೋಣ ಎಂದರು.
ನೋಟಿಸ್ ಬಂದರೆ ಕಾನೂನು ರೀತಿಯಲ್ಲಿ ಉತ್ತರ ಕೊಡ್ತೇನೆ. ಕಾಂಗ್ರೆಸ್ ಶಾಸಕರು, ಸಿದ್ದರಾಮಯ್ಯ ಸೇರಿ ಹಲವರ ಮೇಲೆ ಕೇಸ್ ಹಾಕಿದ್ದಾರೆ. ಇನ್ನು ಪ್ರಜ್ವಲ್ ಕೇಸ್ ಬಗ್ಗೆ ಎಲ್ಲಾ ಗೊತ್ತಿದೆ. ಯಾವ ರೀತಿ ಕಾನೂನು ಹೋರಾಟ ಮಾಡಬೇಕು ಮಾಡುತ್ತೇವೆ ಎಂದು ಹೊಳೆನರಸೀಪುರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದರು.
ನಮ್ಮ ಕುಟುಂಬ ರಾಜಕೀಯದಲ್ಲಿ ಹೋರಾಟ ಮಾಡಿಕೊಂಡೇ ಬಂದಿರೋದು. ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಸೇರಿಕೊಂಡು ಜೆಡಿಎಸ್ ಮುಗಿಸುವುದಕ್ಕೆ ಹೊರಟಿದ್ದಾರೆ. ಇದಕ್ಕೆ ಏನ್ ಮಾಡೋಕಾಗುತ್ತೆ. ನನಗೆ ಕೋರ್ಟ್ ನೋಟಿಸ್ ಕೊಟ್ಟರೆ ನಮ್ಮ ವಕೀಲರ ಮೂಲಕ ಉತ್ತರ ಕೊಡುತ್ತೇನೆ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತಡೆ ಸಿಗುವ ವಿಶ್ವಾಸವಿದೆ ಎಂಬುದಕ್ಕೆ ರೇವಣ್ಣ ಪ್ರತಿಕ್ರಿಯಿಸಿ, ಮುಂಚಿತವಾಗಿ ನಾನ್ಯಾಕೆ ಅದರ ಬಗ್ಗೆ ಹೇಳಲಿ. ಪ್ರಜ್ವಲ್ ಸುಪ್ರೀಂ ಕೋರ್ಟ್‌ಗೆ ಹಾಕ್ತಾರೋ ಏನು ಮಾಡ್ತಾರೋ ಅವರಿಗೆ ಬಿಟ್ಟಿದ್ದು. ಅವರ ಕೇಸ್‌ನಲ್ಲಿ ಏನಾಗುತ್ತದೆ ಎಂದು ನಾನು ಏನು ಹೇಳಿಲಿಕ್ಕೆ ಆಗುತ್ತದೆ. ಕೆಲವರು ಭವಿಷ್ಯ ನುಡಿಯೋರು ಇದ್ದಾರೆ, ಅದನ್ನು ನಾನ್ಯಾಕೆ ಹೇಳಲಿ ಎಂದರು.
ಕಾನೂನು ಏನಿದೆ ಅದನ್ನು ಪ್ರಜ್ವಲ್ ಅವರು ಮಾಡಿಕೊಳ್ಳುತ್ತಾರೆ. ಅವರು ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅದನ್ನೆಲ್ಲಾ ತಿಳಿದುಕೊಂಡು, ಎಲ್ಲಾ ಆದಮೇಲೆ ಸವಿಸ್ತಾರವಾಗಿ ಹೇಳುತ್ತೇನೆ. ನಮ್ಮ ಜೀವನದಲ್ಲಿ ನಾವು ಯಾವ ಆಸ್ತಿಯನ್ನು ಮುಚ್ಚಿಟ್ಟಿಲ್ಲ. ಐಟಿ ರಿಪೋರ್ಟ್ ಅನ್ನು ಕೊಡುತ್ತೇನೆ. ನನ್ನ ಹೆಂಡತಿನೂ ಕೊಡ್ತಾರೆ. ಪಡುವಲ ಹಿಟ್ಟೆ ಬಳಿ ತೆಂಗು, ಅಡಿಕೆ, ಸಪೋಟ, ಮಾವಿನ ತೋಟವೂ ಇದೆ. ಈ ಎಲ್ಲವನ್ನು ಚೆಕ್ ಮೇಲೆ ತೆಗೆದುಕೊಂಡಿರೋದು. ನನ್ನದೆಲ್ಲ ಚೆಕ್ ವ್ಯವಹಾರ. ಪ್ರತಿ ಹಂತ ಹಂತದಲ್ಲೂ ಇನ್ಕಮ್ ಟ್ಯಾಕ್ಸ್‌ಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ ಎಂದರು.
ಎಚ್.ಡಿ ರೇವಣ್ಣ ವಿರುದ್ಧ ಸಮನ್ಸ್ ಜಾರಿ ಮಾಡಲು ಮುಖ್ಯ ಕಾರ್ಯದರ್ಶಿಗೆ ಕೋರ್ಟ್ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಖ್ಯ ಕಾರ್ಯದರ್ಶಿಗೆ ಯಾಕೆ ಸೂಚಿಸುತ್ತಾರೆ. ನೋಟಿಸ್ ಬಂದರೆ ನಾನೇ ತೆಗೆದುಕೊಳ್ಳುತ್ತೇನೆ ಎಂದರು. ಇನ್ನು ಇವೆಲ್ಲಾ ದೇವೇಡಗೌಡರ ಕುಟುಂಬಕ್ಕೆ ಹೊಸತೇನಲ್ಲ. ಇಡೀ ರಾಜ್ಯದಲ್ಲಿ ಲೋಕಾಯುಕ್ತವನ್ನು ಎದುರಿಸಿದ್ದು ದೇವೇಗೌಡರು. ಅವರನ್ನು ಬಿಟ್ಟರೆ ಯಾರಾದರೂ ರಾಜಕಾರಣಿಗಳು ಎದುರಿಸಿದ್ದಾರಾ? ಕೋರ್ಟ್‌ನಲ್ಲೂ ನಮ್ಮ ಕುಟುಂಬದ ಮೇಲೆ ಎಷ್ಟೆಷ್ಟು ಕೇಸ್ ಹಾಕಿದರು ಎಂದು ವಾಗ್ದಾಳಿ ನಡೆಸಿದರು.
ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ನ್ಯಾಯಾಲಯದ ಬಗ್ಗೆ ನನಗೆ ಗೌರವವಿದೆ. ಆರು ಬಾರಿ ಎಂಎಲ್ಎ ಆಗಬೇಕಾದರೆ ಇವನ್ನೆಲ್ಲಾ ಎದುರಿಸಿಯೇ ಆಗೊರೋದು. ನಮಗೆ ನಮ್ಮ ಕೆಲಸ ಆಯ್ತು ನಮ್ಮ ಜಮೀನಾಯ್ತು ಅಷ್ಟೇ. ಹಾಗೆಯೇ ನಮ್ಮ ರೈತರನ್ನು ನೋಡಿಕೊಂಡು ಇರುತ್ತೇನೆ ಎಂದರು.












Click it and Unblock the Notifications