ಸಕಲೇಶಪುರ : ಕಾಫಿ ದಿನಾಚರಣೆ ಉದ್ಘಾಟನೆಗೆ ಯಶ್ ದಂಪತಿ?
ಸಕಲೇಶಪುರ, ಸೆ. 18 : ಇಲ್ಲಿನ ಪಾಳ್ಯ ಸಮೀಪದ ವೇ ಬ್ರಿಜ್ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಅಕ್ಟೋಬರ್ 01ರಂದು ಆಚರಿಸಲಾಗುತ್ತಿದೆ.
ಮೂರನೇ ವರ್ಷದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಉದ್ಘಾಟನೆಗೆ ತಾರಾ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಎಚ್ ಡಿಪಿಎ ಅಧ್ಯಕ್ಷ ಸಿ.ಎಸ್ ಮಹೇಶ್ ಅವರು ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಕರ್ನಾಟಕ ಬೆಳೆಗಾರರ ಒಕ್ಕೂಟವು ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸತತವಾಗಿ ಆಯೋಜಿಸುತ್ತಾ ಬಂದಿದೆ.
ಕೃಷಿ ಹಾಗೂ ನೀರಿನ ಮಹತ್ವದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾಗಿರುವ ನಟ ಯಶ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲು ಉದ್ದೇಶಿಸಲಾಗಿದೆ. ಅಂದು ಪರಿಶುದ್ಧ ಹಾಗೂ ಸ್ವಾದಿಷ್ಟ ಕಾಫಿಯನ್ನು ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನೀಡಿ ಪರಿಚಯಿಸುವುದು, ಕಾಫಿ ತಯಾರಿಸುವ ಬಗ್ಗೆ ಮಾಹಿತಿ ನೀಡುವುದು ಹಾಗೂ ಕಾಫಿ ಉದ್ಯಮದ ಮುಂದಿನ ಬೆಳವಣಿಗೆ ಬಗ್ಗೆ ಚರ್ಚಿಸಲಾಗುವುದು ಎಂದು ಮಹೇಶ್ ಹೇಳಿದರು.












Click it and Unblock the Notifications