ಸೊಲ್ಲಾಪುರ-ಯಶವಂತಪುರ ರೈಲು ಹಾಸನದ ತನಕ ವಿಸ್ತರಣೆ
ಹಾಸನ, ಜೂನ್ 14 : ಸೊಲ್ಲಾಪುರ-ಯಶವಂತಪುರ ರೈಲನ್ನು ಹಾಸನದ ತನಕ ವಿಸ್ತರಣೆ ಮಾಡಲಾಗಿದೆ. 70 ರೂ.ನಲ್ಲಿ ಹಾಸನ-ಬೆಂಗಳೂರು ನಡುವೆ ಜನರು ಪ್ರಯಾಣಿಸಬಹುದಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರದಿಂದ ಬೆಂಗಳೂರಿನ ಯಶವಂತಪುರದ ತನಕ ಸಂಚಾರ ನಡೆಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಹಾಸನದ ತನಕ ವಿಸ್ತರಣೆ ಮಾಡಲಾಗಿದೆ. ಹಾಸನ-ಸೊಲ್ಲಾಪುರ ನಡುವಿನ 830 ಕಿ.ಮೀ. ದೂರವನ್ನು 16 ಗಂಟೆಗಳಲ್ಲಿ ರೈಲು ಕ್ರಮಿಸಲಿದೆ.
24 ಬೋಗಿಳನ್ನು ಹೊಂದಿರುವ ರೈಲು ಹಾಸನ-ಯಶವಂತಪುರ-ಯಲಹಂಕ-ದೊಡ್ಡಬಳ್ಳಾಪುರ-ಗೌರಿಬಿದನೂರು-ಹಿಂದೂಪುರ-ಧರ್ಮಾವರಂ-ಗುಂತಕಲ್-ಮಂತ್ರಾಲಯ-ರಾಯಚೂರು-ಕಲಬುರಗಿ ಮಾರ್ಗವಾಗಿ ಸೊಲ್ಲಾಪುರಕ್ಕೆ ತೆರಳಲಿದೆ.

11311/ 11312 ಸಂಖ್ಯೆಯ ರೈಲು ಮಂತ್ರಾಲಯದ ಮೂಲಕ ಸಂಚಾರ ನಡೆಸಲಿದೆ. ಆದ್ದರಿಂದ, ಹಾಸನ, ಮಂಡ್ಯ, ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ವೇಳಾಪಟ್ಟಿ : ಪ್ರತಿದಿನ ಸಂಜೆ 7.20ಕ್ಕೆ ಸೊಲ್ಲಾಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 7.10ಕ್ಕೆ ಯಶವಂತಪುರಕ್ಕೆ ಬರಲಿದೆ. 7.40ಕ್ಕೆ ಯಶವಂತಪುರದಿಂದ ಹೊರಟು 11.25ಕ್ಕೆ ಹಾಸನ ನಿಲ್ದಾಣಕ್ಕೆ ಆಗಮಿಸಲಿದೆ.
ಚಿಕ್ಕಬಾಣಾವರ, ನೆಲಮಂಗಲ, ಸೋಲೂರು, ತಿಪ್ಪಸಂದ್ರ ಕುಣಿಗಲ್ ಮಾರ್ಗವಾಗಿ ರೈಲು ಕುಣಿಗಲ್ ತಲುಪಲಿದೆ. ಕುಣಿಗಲ್, ಯಡೆಯೂರು, ಬಿ.ಜಿ.ನಗರ, ಶ್ರವಣಬೆಳಗೊಳ ನಿಲ್ದಾಣದಲ್ಲಿ ಮಾತ್ರ ರೈಲು ನಿಲ್ಲಲಿದೆ.
ಚಿಕ್ಕಬಾಣಾವರ, ನೆಲಮಂಗಲ, ಹಿರಿಸಾವೆ, ಚನ್ನರಾಯಪಟ್ಟಣದಲ್ಲಿ ರೈಲು ನಿಲ್ಲಿವುದಿಲ್ಲ. ಹಾಸನ-ಯಶವಂತಪುರ ನಡುವಿನ ಪ್ರಯಾಣಕ್ಕೆ 70 ರೂ. ಟಿಕೆಟ್ ದರ ನಿಗದಿ ಪಡಿಸಲಾಗಿದೆ.
ಹಾಸನ-ಬೆಂಗಳೂರು ವೇಳಾಪಟ್ಟಿ : ಹಾಸನದಿಂದ ಸಂಜೆ 4.10ಕ್ಕೆ ಹೊರಡಲಿರುವ ರೈಲು ಶ್ರವಣಬೆಳಗೊಳ-ಬಿ.ಜಿ.ನಗರ-ಯಡಿಯೂರು-ಕುಣಿಗಲ್ ನಿಲ್ದಾಣಗಳಲ್ಲಿ ನಿಲ್ಲಿಸಿ, ರಾತ್ರಿ 8.10ಕ್ಕೆ ಯಶವಂತಪುರಕ್ಕೆ ತಲುಪಲಿದೆ. 8.50ಕ್ಕೆ ಹೊರಟು ಮರುದಿನ ಬೆಳಗ್ಗೆ 8.40ಕ್ಕೆ ಸೊಲ್ಲಾಪುರ ತಲುಪಲಿದೆ.












Click it and Unblock the Notifications