ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಚಿಕ್ಕಬಳ್ಳಾಪುರದ ಆರು ಮಂದಿ ಸ್ಥಳದಲ್ಲೇ ಸಾವು
ಹಾಸನ, ಮೇ 26: ಬೆಳ್ಳಂಬೆಳಗ್ಗೆ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿ 75ನಲ್ಲಿ ನಡೆದಿದೆ.
ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ ಮತ್ತು ಕಾರು ಚಾಲಕ ರಾಕೇಶ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ಚಿಕ್ಕಬಳ್ಳಾಪುರ ಮೂಲದವರು ಎಂದು ತಿಳಿದು ಬಂದಿದೆ. ಆರು ಜನರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ಭೇಟಿಯಾಗಿ ವಾಪಸ್ ಚಿಕ್ಕಬಳ್ಳಾಪುರಕ್ಕೆ ಮರಳುತ್ತಿದ್ದರು. ಕಾರು ಹಾಸನ ಜಿಲ್ಲೆಯ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿ ಬರುತ್ತಿದ್ದಂತೆ ನಿದ್ದೆ ಮಂಪರಿನಲ್ಲಿ ಟ್ರಕ್‌ಗೆ ಡಿಕ್ಕಿಯಾಗಿದೆ.
ವೇಗವಾಗಿ ಬಂದ ಕಾರು ಟ್ರಕ್‌ಗೆ ಗುದ್ದಿದ್ದು, ಅಪಘಾತದ ಭೀಕರತೆಗೆ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜು ಆಗಿದ್ದು, ಪೊಲೀಸರು ಹರಸಾಹಸ ಪಟ್ಟು ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಭೇಟಿ ನೀಡಿದ್ದಾರೆ. ಸದ್ಯ ಪೊಲೀಸರು ಮೃತದೇಹಗಳನ್ನು ಹೊರತೆಗೆಯುತ್ತಿದ್ದು, ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಿದ್ದಾರೆ.












Click it and Unblock the Notifications