ಕಾಳಿ ವಿಗ್ರಹಕ್ಕೆ ಹಾನಿ; ದೇವಾಲಯಕ್ಕೆ ಪ್ರಜ್ವಲ್ ರೇವಣ್ಣ ಭೇಟಿ
ಹಾಸನ, ನವೆಂಬರ್ 26: ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೊಡ್ಡಗದ್ದವಳ್ಳಿ ಗ್ರಾಮದ ಲಕ್ಷ್ಮೀ ದೇವಿ ದೇವಾಲಯಕ್ಕೆ ಭೇಟಿ ನೀಡಿದರು. ದೇವಾಲಯದ ಕಾಳಿ ವಿಗ್ರಹಕ್ಕೆ ಕಳೆದ ವಾರ ಹಾನಿ ಮಾಡಲಾಗಿದ್ದು, ಈ ಪ್ರಕರಣದ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯ ಸಹ ವರದಿ ಕೇಳಿದೆ.
ಗುರುವಾರ ಪ್ರಜ್ವಲ್ ರೇವಣ್ಣ ದೊಡ್ಡಗದ್ದವಳ್ಳಿ ಗ್ರಾಮದ ಚತುಷ್ಕೂಟ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಾಲಯದ ದಕ್ಷಿಣ ಗರ್ಭಗುಡಿಯ ಮಹಾಕಾಳಿ ಅಮ್ಮನವರ ವಿಗ್ರಹವು ಒಡೆದು ಹೋದ ಬಗ್ಗೆ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.

ಪ್ರಕರಣದ ಬಗ್ಗೆ ತನಿಖೆಯನ್ನು ಸಮರ್ಪಕವಾಗಿ ನಡೆಸಿ ತಪ್ಪಿತಸ್ಥರನ್ನು ಶೀಘ್ರವೇ ಪತ್ತೆಮಾಡುವಂತೆ ಅವರು ಅಪರ ಪೋಲಿಸ್ ವರಿಷ್ಠಾಧಿಕಾರಿ ನಂದಿನಿ ಅವರಿಗೆ ಸೂಚನೆ ನೀಡಿದರು. ಪ್ರಮುಖ ದೇವಾಲಯಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು, ಸಿಸಿಟಿವಿ ಅಳವಡಿಸಬೇಕು ಎಂದುದ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸ್ವರೂಪ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್, ಅಪರ ಪೋಲಿಸ್ ವರಿಷ್ಠಾಧಿಕಾರಿ ನಂದಿನಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಸಂಸದರ ಜೊತೆ ಉಪಸ್ಥಿತರಿದ್ದರು.
ಚತುಷ್ಕೂಟ ಮಹಾಲಕ್ಷ್ಮೀ ದೇವಾಲಯಕ್ಕೆ ಸುಮಾರು 906 ವರ್ಷಗಳ ಇತಿಹಾಸವಿದೆ. ಚತುಷ್ಕೂಟ ಶೈಲಿಯಲ್ಲಿ ನಿರ್ಮಾಣವಾಗಿರುವ ದಕ್ಷಿಣ ಭಾತರದ ಮೊದಲ ದೇವಾಲಯ ಇದಾಗಿದೆ. ದೇವಾಲಯದಲ್ಲಿ ನಾಲ್ಕು ಗರ್ಭಗುಡಿಗಳಿವೆ.
ಕಾಳಿ ವಿಗ್ರಹದ ಮುಂಭಾಗದ ಗರ್ಭಗುಡಿಯಲ್ಲಿ ಕಾಲಬೈರವನ ವಿಗ್ರಹ ಇದೆ. ಲಕ್ಷ್ಮೀ ದೇವಾಲಯದ ಮುಂಭಾಗದ ಗರ್ಭಗುಡಿಯಲ್ಲಿ ಶಿವನ ಲಿಂಗವಿದೆ. ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ಕಾಳಿ ವಿಗ್ರಹಕ್ಕೆ ಹಾನಿಯಾಗಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.












Click it and Unblock the Notifications