ಸಕಲೇಶಪುರದಲ್ಲಿ ನಡುಬೀದಿಯಲ್ಲೇ ಧರಣಿ ಕುಳಿತ ಕಾನ್ ಸ್ಟೆಬಲ್
ಹಾಸನ, ಆಗಸ್ಟ್ 19: ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು ನ್ಯಾಯ ಬೇಕೆಂದು ನಡುರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ಘಟನೆ ಹಾಸನದ ಸಕಲೇಶಪುರ ಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರತಿಭಟನೆಗೆ ಕುಳಿತಿದ್ದ ವಿಡಿಯೋ, ಫೋಟೊ ವೈರಲ್ ಆಗಿದೆ.
Recommended Video
ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್‍ಸ್ಟೆಬಲ್ ದಯಾನಂದ್ ಅವರು ಪ್ರತಿಭಟನೆಗೆ ಕುಳಿತವರು. ರಾಷ್ಟ್ರೀಯ ಹೆದ್ದಾರಿ 75ರ ಅಪೋಲೊ ಮೆಡಿಕಲ್ ಮುಂದೆ ದಯಾನಂದ್ ಅವರು ಕಾರು ನಿಲ್ಲಿಸಿ ಔಷಧಿ ತರಲು ಹೋಗಿದ್ದರು. ಇದೇ ಸಂದರ್ಭ ಅಲ್ಲಿಗೆ ಬಂದ ತಹಶೀಲ್ದಾರ್ ಮಂಜುನಾಥ್, ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ್ದನ್ನು ನೋಡಿದ್ದಾರೆ.
ನಂತರ ತಮ್ಮ ಕಾರು ಚಾಲಕನಿಗೆ ಕಾನ್ ಸ್ಟೆಬಲ್ ಅವರ ಕಾರಿನ ಚಕ್ರಗಳ ಗಾಳಿ ತೆಗೆಯಲು ಹೇಳಿದ್ದಾರೆ. ಚಾಲಕ ಕಾರಿನ ನಾಲ್ಕು ಚಕ್ರದ ಗಾಳಿ ತೆಗೆದಿದ್ದಾರೆ. ಈ ಸಂದರ್ಭ ಮೆಡಿಕಲ್ ಶಾಪ್ ನಿಂದ ವಾಪಸ್ಸಾದ ಕಾನ್ ಸ್ಟೆಬಲ್ ಗೂ ತಹಶೀಲ್ದಾರ್ ಗೂ ಮಾತಿನ ಚಕಮಕಿ ನಡೆದಿದೆ. ಸ್ಥಳದಿಂದ ತಹಶೀಲ್ದಾರ್ ಹೊರಟಿದ್ದಾರೆ. ಆದರೆ ದಯಾನಂದ್ ಅವರು ಗಾಂಧೀಜಿ ಫೋಟೊ ಹಿಡಿದು ಕಾರಿನ ಬಳಿ ಕುಳಿತು ಪ್ರತಿಭಟನೆಗೆ ಕುಳಿತಿದ್ದಾರೆ. ಸಕಲೇಶಪುರದಲ್ಲಿ ಬಹಳ ಕಿರಿದಾದ ಜಾಗವಿದ್ದು, 2 ನಿಮಿಷದಲ್ಲಿ ಮೆಡಿಕಲ್ ಶಾಪ್ ನಿಂದ ಹೊರ ಬರುವಷ್ಟರಲ್ಲಿ ಕಾರಿನ ಚಕ್ರಗಳ ಗಾಳಿ ತೆಗೆದಿದ್ದು ಸರಿಯಲ್ಲ. ದಂಡ ಹಾಕಲಿ ಅಥವಾ ನೋಟಿಸ್ ನೀಡಲಿ, ನನಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಧರಣಿ ಕುಳಿತು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ರಸ್ತೆಯಲ್ಲಿ ಕೆಲ ಸಮಯ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ರಸ್ತೆಯಲ್ಲಿ ಹೋಗುವವರು ಇವರು ಹೀಗೆ ಕುಳಿತದ್ದನ್ನು ಕಂಡು ಫೋಟೊ ತೆಗೆದುಕೊಳ್ಳಲು ಮುಂದಾಗಿದ್ದರು. ಕೊನೆಗೆ ನಗರ ಠಾಣೆ ಪಿಎಸ್ ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್ ಐ ಚಂದ್ರಶೇಖರ್ ಬಂದು ಪೊಲೀಸರ ಸಹಾಯದಿಂದ ದಯಾನಂದ್ ಅವರನ್ನು ಎತ್ತಿಕೊಂಡು ನಗರ ಠಾಣೆಗೆ ಕರೆದೊಯ್ದರು.












Click it and Unblock the Notifications