60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು: ಕಣ್ಣೀರಿಟ್ಟ ರೈತ ಮಹಿಳೆ
ಹಾಸನ, ಜನವರಿ 30: ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ಹಾಸನ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದ್ದು ರೈತ ಮಹಿಳೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ಮಹಿಳೆ ತಾಯಮ್ಮ ಅವರಿಗೆ ಸೇರಿದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ತಾಯಮ್ಮ ಕಳೆದ ಎರಡು ವರ್ಷದಿಂದ ತುಂಬಾ ಶ್ರಮವಹಿಸಿ ಅಡಿಕೆ ಗಿಡ ಬೆಳೆಸಿದ್ದರು.
ಎಲ್ಲ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರು. ಆದರೆ ಕಳೆದ ರಾತ್ರಿ ಸುಮಾರು 60ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಮಾಡಿದ್ದಾರೆ. ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದನ್ನು ಕಂಡು ತಾಯಮ್ಮ ಕಣ್ಣೀರಿಟ್ಟಿದ್ದಾರೆ.
ಕಿಡಿಗೇಡಿಗಳ ಕೃತ್ಯದಿಂದ ರೈತ ಮಹಿಳೆಗೆ ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ನನಗೆ ಆದ ಪರಿಸ್ಥಿತಿ ಬೇರೆ ಯಾವ ರೈತರಿಗೂ ಆಗಬಾರದು. ಈ ಕೆಲಸ ಮಾಡಿದವರಿಗೆ ರೈತರ ಕಷ್ಟದ ಅರಿವಿಲ್ಲ. ಕೂಡಲೇ ಅವರನ್ನು ಕಂಡು ಹಿಡಿದು ಶಿಕ್ಷೆ ನೀಡಬೇಕು ಎಂದು ರೈತಮಹಿಳೆ ಮನವಿ ಮಾಡಿದ್ದಾರೆ. ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರೈತ ಮಹಿಳೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರೈತರಿಗೆ ಶಕ್ತಿ ತುಂಬುವ ಕೆಲಸ ಪಶುಪಾಲನೆ, ಪಶುವೈದ್ಯಕೀಯ ಇಲಾಖೆ ಮಾಡಬೇಕಿದೆ: ಪ್ರೀತಂಗೌಡ
ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತರು ಬೇಸಾಯದ ಜೊತೆಗೆ ಹೈನುಗಾರಿಕೆ ಮೇಲೂ ಹೆಚ್ಚು ಅವಲಂಬಿತರಾಗಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆ ಮಾಡಬೇಕಿದೆ ಎಂದು ಶಾಸಕರಾದ ಪ್ರೀತಂ.ಜೆ.ಗೌಡ ತಿಳಿಸಿದ್ದಾರೆ.
ನಗರದ ಸಂತೆ ಪೇಟೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ತರಬೇತಿ ಕಟ್ಟಡಗಳನ್ನು ಪ್ರೀತಂ ಗೌಡ ಉದ್ಘಾಟಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತಿವೃಷ್ಠಿ, ಅನಾವೃಷ್ಠಿ ಕೃಷಿಕರ ಲಾಭ ಹಾಳು ಮಾಡಿದ್ರೂ, ಹೈನುಗಾರಿಕೆ ರೈತಾಪಿ ವರ್ಗದ ಬದುಕು ಉಳಿಸುತ್ತಿದೆ ಎಂದರು.
ಜಾನುವಾರುಗಳ ಆರೋಗ್ಯ ಸುರಕ್ಷತೆಯ ಜವಾಬ್ದಾರಿ ಪಶುವೈದ್ಯಕೀಯ ಇಲಾಖೆಯದ್ದಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಹೈನುಗಾರಿಕೆ ಪ್ರಧಾನ ಕಸುಬು. ಇದೇ ಅವರ ಆದಾಯ ಮೂಲವಾಗಿದೆ. ಜೊತೆಗೆ ಕುರಿ, ಕೋಳಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರ ಪಶುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವ ಜೊತೆಗೆ ತಮ್ಮ ಶ್ರಮವನ್ನು ಲಾಭದಾಯಕವಾಗಿಸಿಕೊಳ್ಳುವ ಬಗ್ಗೆ ಸೂಕ್ತ ತರಬೇತಿ ಒದಗಿಸಿ ಎಂದು ಮನವಿ ಮಾಡಿದರು.
ರೈತರಿಗೆ ಬೇಕಾದ ಮಾಹಿತಿ ಮಾರ್ಗದರ್ಶನಕ್ಕೆ ಸೂಕ್ತ ನಿಗದಿತ ಸ್ಥಳ ಬೇಕಾಗಿತ್ತು. ಜೊತೆಗೆ ವೈದ್ಯಾಧಿಕಾರಿಗಳು ಪಶುವೈದ್ಯಕೀಯ ಸಿಬ್ಬಂದಿಗೂ ತರಬೇತಿ ನೀಡುವ ಮೈಸೂರು ವಿಭಾಗದ ಕಚೇರಿ ಹಾಸನದಲ್ಲಿ ಪ್ರಾರಂಭವಾಗಿರುವುದು ಸಂತೋಷದ ವಿಚಾರ. ಕಟ್ಟಡಗಳ ಉಳಿಕೆ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಮೂಲಕ ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications