Amit Shah In Hassan: ಹಾಸನದ 4 ಕ್ಷೇತ್ರಗಳಲ್ಲಿ ಗೆಲುವು; ಪ್ರೀತಂ ಗೌಡ ಬೆನ್ನಿಗೆ ನಿಂತ ಅಮಿತ್ ಶಾ
ಬಿರು ಬೇಸಿಗೆಯ ಬಿಸಿಲಿನಲ್ಲಿಯೂ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ನಾಮಪತ್ರ ವಾಪಸ್ ಪ್ರಕ್ರಿಯೆಯ ನಂತರ ಚುನಾವಣಾ ಕಣ ಮತ್ತಷ್ಟು ಕಳೆಗಟ್ಟಿದೆ. ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಗೆಲುವಿಗಾಗಿ ಮತದಾರರ ಬಳಿ ದಾಂಗುಡಿ ಇಡುತ್ತಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೇಂದ್ರ ನಾಯಕರೇ ರಾಜ್ಯದಲ್ಲಿ ರಣತಂತ್ರ ರೂಪಿಸುತ್ತಿದ್ದು, ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅಮಿತ್ ಶಾ ಮಿಂಚಿನ ಸಂಚಾರ ನಡೆಸಿದ್ದಾರೆ. ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಪ್ರಚಾರ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.

ಇದೇ ವೇಳೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ಸೋಮವಾರ, ಏಪ್ರಿಲ್ 24ರಂದು ಕರ್ನಾಟಕಕ್ಕೆ ಬಂದಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಬೆಳಿಗ್ಗೆ ಮೈಸೂರು, ಮಧ್ಯಾಹ್ನ ಚಾಮರಾಜನಗರ ಜಿಲ್ಲೆಯಲ್ಲಿ ರೋಡ್ ಶೋ ಮೂಲಕ ಪ್ರಚಾರ ಮಾಡಿದರೆ, ಸಂಜೆಯ ವೇಳೆಗೆ ಹಾಸನ, ಸಕಲೇಶಪುರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡಿದರು. ಸಂಜೆಯ ನಂತರ ಅಮಿತ್ ಶಾ ಅವರು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.
ಹಾಸನದ ಸಕಲೇಶಪುರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ, "ಶಾಸಕ ಪ್ರೀತಂ ಗೌಡ ಮಾಡಿರುವ ಅಭಿವೃದ್ಧಿಯ ಆಧಾರದಲ್ಲಿ ಹಾಸನ ಜಿಲ್ಲೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 4 ಸ್ಥಾನ ಗೆಲ್ಲುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

2018ರ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಚೊಚ್ಚಲ ಬಾರಿಗೆ ಗೆದ್ದ ಪ್ರೀತಂ ಗೌಡ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಕೆಲಸದಿಂದ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಮೇಲೆ ನಂಬಿಕೆ ಜಾಸ್ತಿಯಾಗಿದೆ ಎಂದರು.
"ಜೆಡಿಎಸ್ ಪಕ್ಷದ ಎಲ್ಲಾ ನಾಯಕರು ನಮ್ಮ ಪ್ರೀತಂ ಗೌಡಗೆ ಸವಾಲು ಹಾಕಿದ್ದಾರೆ. ಪ್ರೀತಂ ಗೌಡರ ಜೊತೆ ನಾನು ಸೇರಿದಂತೆ ಇಡೀ ಬಿಜೆಪಿ ಪಕ್ಷ ಬೆನ್ನಿಗೆ ನಿಲ್ಲಲಿದೆ. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಮೈದಾನದಿಂದ ಓಡಿಸುವುದು ಅಷ್ಟು ಸುಲಭವಲ್ಲ," ಎಂದು ಜೆಡಿಎಸ್ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದರು.
ಜೆಡಿಎಸ್‌ಗೆ ಮತ ನೀಡಿದರೆ, ಕಾಂಗ್ರೆಸ್‌ಗೆ ಮತ ನೀಡಿದಂತೆ
"ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದರು. ನಾವು ಅದನ್ನು ಹಿಂಪಡೆದು ಹಿಂದುಳಿದ ಮತ್ತು ದಲಿತ ವರ್ಗದವರಿಗೆ ನೀಡಿದ್ದೇವೆ. ಜೆಡಿಎಸ್‌ಗೆ ಮತ ನೀಡಿದರೆ, ಅದು ಕಾಂಗ್ರೆಸ್‌ಗೆ ಮತ ನೀಡಿದಂತಾಗುತ್ತದೆ," ಎಂದರು.

ಹಾಸನ ಜಿಲ್ಲೆಯಲ್ಲಿ ಬಿಜೆಪಿಗೆ ಒಂದೇ ಸ್ಥಾನವಿದೆ ಎಂದು ಹೇಳಿದ ಅಮಿತ್ ಶಾ, "ಪ್ರೀತಂ ಗೌಡ ಅವರು "ಕುಟುಂಬ ರಾಜಕಾರಣದ' ವಿರುದ್ಧ ಉತ್ತಮ ಕೆಲಸ ಮಾಡಿದ್ದಾರೆ. ಅವರ ಕೆಲಸದ ಆಧಾರದ ಮೇಲೆ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ," ಎಂದು ಹೇಳಿದರು.
ಮುಸ್ಲಿಂ ಮೀಸಲಾತಿ ತರುತ್ತೇವೆ ಎಂದು ಜೆಡಿಎಸ್- ಕಾಂಗ್ರೆಸ್ ಹೇಳಿವೆ
"ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಿತ್ತು ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಸರ್ಕಾರ ಅದನ್ನು ತೆಗೆದುಹಾಕಿ ಲಿಂಗಾಯತರು, ಒಕ್ಕಲಿಗರು ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದೆ," ಎಂದು ಹೇಳಿದರು.
"ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮತ್ತೊಮ್ಮೆ ಮುಸ್ಲಿಂ ಮೀಸಲಾತಿ ತರುತ್ತೇವೆ ಎಂದು ಹೇಳುತ್ತಿವೆ. "ನೀವು ಯಾರ ಮೀಸಲಾತಿ ಕಡಿಮೆ ಮಾಡುತ್ತೀರಿ ಎಂದು ನಾನು ಕೇಳಲು ಬಯಸುತ್ತೇನೆ? ನೀವು ಒಕ್ಕಲಿಗರು, ಲಿಂಗಾಯತರು ಅಥವಾ ಎಸ್‌ಸಿ/ಎಸ್‌ಟಿ ಮೀಸಲಾತಿ ಕಡಿತ ಮಾಡುತ್ತೀರಾ? ನೀವು ಯಾರ ವಿರುದ್ಧ ಇದ್ದೀರಾ? ಅದನ್ನು ಜನರಿಗೆ ತಿಳಿಸಿ," ಎಂದರು.
"ಸಕಲೇಶಪುರ ಕ್ಷೇತ್ರದ ಜನತೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಸಿಮೆಂಟ್ ಮಂಜು ಗೆದ್ದರೆ ಮತ್ತೆ ಸಕಲೇಶಪುರಕ್ಕೆ ಬರುತ್ತೇನೆ. ಯುವಕ ಸಿಮೆಂಟ್ ಮಂಜುಗೆ ಯುವಕರು ವೋಟು ಹಾಕಿ ಗೆಲ್ಲಿಸಬೇಕು," ಎಂದು ಅಮಿತ್ ಶಾ ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಒಕ್ಕಲಿಗ, ಲಿಂಗಾಯಿತ, ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದೇವೆ. ಸಕಲೇಶಪುರದಲ್ಲಿ ಸಿಮೆಂಟ್ ಮಂಜುಗೆ ಮತ್ತು ಹಾಸನದಲ್ಲಿ ಪ್ರೀತಂ ಗೌಡಗೆ ಮತ ನೀಡಿ ಗೆಲ್ಲಿಸಿ ಎಂದು ಕರೆಕೊಟ್ಟರು.
ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ಪ್ರೀತಂ ಗೌಡ ಮತ್ತು ಸಿಮೆಂಟ್ ಮಂಜುನಾಥ್ ಜೊತೆಯಲ್ಲಿ ನಿಂತಿರುವ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ರಸ್ತೆಬದಿ ಮತ್ತು ಹತ್ತಿರದ ಕಟ್ಟಡಗಳ ಮೇಲೆ ನಿಂತು ಜನರು ಉತ್ಸಾಹದಿಂದ ಸ್ವಾಗತಿಸಿದರು. ಅವರಲ್ಲಿ ಅನೇಕರು ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಘೋಷಣೆಗಳನ್ನು ಕೂಗಿದರು.
ಯಾರು ಯಾರು ಕಮಲಕ್ಕೆ ಓಟು ಹಾಕುತ್ತೀರಾ ಕೈ ಎತ್ತಿ ಎಂದು ಪ್ರಶ್ನಿಸಿದಾಗ ನೆರೆದಿದ್ದ ಜನರೆಲ್ಲಾ ಕೈ ಮೇಲೆತ್ತಿದರು. ಇಷ್ಟು ಜನ ಸೇರಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅಮಿತ್ ಶಾ ತಿಳಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications