Daali Dhananjay: ಮದುಮಗನಂತೆ ಕುಟುಂಬದ ಜೊತೆ ಬಂದು ಮತದಾನ ಮಾಡಿದ ಡಾಲಿ ಧನಂಜಯ್
ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿ 2023ರ ವಿಧಾನಸಭೆ ಚುನಾವಣೆಗೆ ಇಂದು (ಬುಧವಾರ, ಮೇ 10) ಮತದಾನ ನಡೆಯುತ್ತಿದ್ದು, ರಾಜ್ಯದ ಮತದಾರರು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಬೆಳಗ್ಗೆ 11 ಗಂಟೆಯ ವೇಳೆಗೆ ಶೇ.20.99ರಷ್ಟು ಮತದಾನವಾಗಿದೆ.
ರಾಜ್ಯದ ಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತವನ್ನು ಚಲಾಯಿಸುತ್ತಿದ್ದು, ಇದೇ ವೇಳೆ ಸ್ಯಾಂಡಲ್‌ವುಡ್ ಡಾಲಿ ಧನಂಜಯ್ ಕೂಡ ತವರೂರಿನಲ್ಲಿ ಮತದಾನ ಮಾಡಿದ್ದಾರೆ. ಬುಧವಾರ ಬೆಳಗ್ಗೆಯೇ ಮತಗಟ್ಟೆಗೆ ಬಂದ ಧನಂಜಯ್ ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ.

ಡಾಲಿ ಧನಂಜಯ್ ಅವರು ತಮ್ಮ ಹುಟ್ಟೂರಾದ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಕುಟುಂಬದೊಂದಿಗೆ ಮತದಾನ ಮಾಡಿದರು. ಬಿಳಿ ಪಂಚೆ ಮತ್ತು ಬಿಳಿ ಶರ್ಟ್‌ನಲ್ಲಿ ಮಿಂಚಿದ ಡಾಲಿ ಧನಂಜಯ್ ಪಕ್ಕಾ ಮದುಮಗನಂತೆ ಕಂಗೊಳಿಸುತ್ತಿದ್ದರು.
ಡಾಲಿ ಧನಂಜಯ್ ಅವರು ತಮ್ಮ ಇಡೀ ಕುಟುಂಬದ ಜೊತೆ ಬಂದು ಮತದಾನ ಮಾಡಿದ್ದಾರೆ. ತಂದೆ, ತಾಯಿ ಅಜ್ಜಿ, ಸಹೋದರಿ, ಸಹೋದರ ಸೇರಿದಂತೆ ಇಡೀ ಕುಟುಂಬದ ಜೊತೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ಇದೇ ವೇಳೆ ಧನಂಜಯ್ ಅವರು ತಮ್ಮ ಸಹೋದರಿ ರಾಣಿ ಜೊತೆ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ ಧನಂಜಯ್ ಅವರು ಸಹೋದರಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ನಂತರ ತಮ್ಮ ಊರು ಕಾಳೇನಹಳ್ಳಿಯ ಬೋರ್ಡ್ ಜೊತೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ.

ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಇಂದು ಬೆಳಿಗ್ಗೆಯಿಂದಲೇ ಬಿರುಸಿನಿಂದ ನಡೆಯುತ್ತಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಆರಂಭವಾಗಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. 224 ಕ್ಷೇತ್ರ, 2,615 ಅಭ್ಯರ್ಥಿಗಳ ಹಣೆಬರಹವನ್ನು ರಾಜ್ಯದ 5,31,33,054 ಮತದಾರರು ನಿರ್ಧರಿಸಲಿದ್ದಾರೆ. ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications