ನಾವು ಗೂಂಡಾಗಿರಿ ರಾಜಕಾರಣ ಮಾಡಿದವರಲ್ಲ: ಪ್ರೀತಂ ಗೌಡಗೆ ಭವಾನಿ ರೇವಣ್ಣ ಪರೋಕ್ಷ ವಾಗ್ದಾಳಿ
ಹಾಸನ, ಮೇ, 02: ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ನಾಯಕರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ. ಅದೇ ರೀತಿ ಹೈವೋಲ್ಟೇಜ್ ಕ್ಷೇತ್ರವಾದ ಹಾನಸದಲ್ಲಿ ಕರವೇ ವತಿಯಿಂದ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಘೋಷಣೆ ಹಾಗೂ ದೇಣಿಗೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಭವಾನಿ ರೇವಣ್ಣ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಭವಾನಿ ರೇವಣ್ಣ, ನಾವು ಯಾವಾಗಲೂ ಗೂಂಡಾಗಿರಿ ರಾಜಕಾರಣ ಮಾಡಿದವರಲ್ಲ. ವಿಶ್ವಾಸ ಬೆಳೆಸಿ, ವಿಶ್ವಾಸದಿಂದ ನಿಮ್ಮ ಮನಸ್ಸು ಗೆದ್ದು, ನಿಮ್ಮನ್ನು ಮತ ಕೇಳುತ್ತೇವೆಯೇ ಹೊರತು, ಬಿಹಾರ್ ಅಂತಹ ರಾಜಕಾರಣವನ್ನು ನಾವು ಮಾಡುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ಪ್ರೀತಂಗೌಡ ವಿರುದ್ಧ ಹರಿಹಾಯ್ದರು.

ಅಲ್ಲದೆ ನೀವೆಲ್ಲ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಕೊಡುತ್ತೇನೆ ಅಂತಾ ಹೇಳಿದ್ದೀರ. ಒಬ್ಬೊಬ್ಬರು ನೂರು ವೋಟು ಹಾಕಿಸುವ ಶಕ್ತಿ ಇದೆ ಅಂದುಕೊಳ್ಳುತ್ತೇನೆ ಎಂದರು.
ಜೆಡಿಎಸ್‌ಗೆ ಬೆಂಬಲ ನೀಡಿದ್ದಕ್ಕೆ ನಾವೆಲ್ಲರೂ ಚಿರಋಣಿ ಆಗಿರುತ್ತೇವೆ. ಅದೇ ರೀತಿ ನಮ್ಮ ಕುಟುಂಬ, ಪ್ರಕಾಶಣ್ಣನ ಕುಟುಂಬ ನಿಮ್ಮ ಜೊತೆಗೆ ಇರುತ್ತದೆ.
ರಾಮ ಸೇತುವೆ ಕಟ್ಟುವಾಗ ಅಳಿಲು ಕೂಡ ಸೇವೆ ಮಾಡಿತ್ತು. ಅದರಿಂದ ಅಳಿಲು ಸೇವೆ ಅಂತಾ ಹೆಸರು ಬಂತು ಎಂದು ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ನೀವು ನಮ್ಮ ಜೊತೆ ಇರುತ್ತೀರ, ನಿಮ್ಮ ಜೊತೆ ನಾವು ಇರುತ್ತೇವೆ. ಯಾವುದೇ ಧಮ್ಕಿಗೆ ನೀವ್ಯಾರು ಹೆದರಬಾರದು. ಎಲ್ಲಾ ಸಮಯದಲ್ಲೂ ನಾವು ನಿಮ್ಮ ಜೊತೆಗಿರುತ್ತೇವೆಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಇನ್ನು ಇತ್ತೀಚೆಗಷ್ಟೇ ಹಾಸನ ಜಿಲ್ಲೆಯ ಬೇಲೂರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ಇಲ್ಲಿನ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಇದೇ ವೇಳೆ ಮಾತನಾಡಿದ ಅವರು, ಬಿಜೆಪಿ ಸಾಂಸ್ಕೃತಿಕ ಸಂಪ್ರದಾಯವನ್ನು ಗೌರವಿಸಿ ಗುರುತಿಸುತ್ತಿದೆ. ಆದರೆ ಕಾಂಗ್ರೆಸ್ ಯಾವತ್ತೂ ಕರ್ನಾಟಕದ ಸಾಂಸ್ಕೃತಿಕ ಬೆಳವಣಿಗೆಗೆ ಸಹಾಕರಿ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಅಲ್ಲದೆ ದೇಶದಲ್ಲೇ ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡಲು ಬಿಜೆಪಿ ಶ್ರಮಿಸುತ್ತಿದೆ ಎಂದು ಹೇಳಿದ್ದರು.
ಜೊತೆಗೆ ಬೇಲೂರು ಚನ್ನಕೇಶವ, ಹಳೇಬೀಡು ಹೊಯ್ಸಳ ದೇವಾಲಯಗಳನ್ನು ಯುನೇಸ್ಕೊ ಪಟ್ಟಿಗೆ ಸೇರಿಸಲು ಬಿಜೆಪಿ ಯತ್ನಿಸಿದೆ. ಕಾಂಗ್ರೆಸ್ ಯಾವತ್ತೂ ಅಭಿವೃದ್ಧಿಯ ಕೆಲಸಗಳನ್ನು ಮಾಡಿಲ್ಲ. ಆದ್ದರಿಂದ ಎಲ್ಲರೂ ಮತದಾನ ಮಾಡುವ ಮೂಲಕ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದಿದ್ದರು.
ಇದೇ ವೇಳೆ ಜನರಿಗೆ ಹೇಳಿ ಅವರ ಮೊಬೈಲ್ ಲೈಟ್ ಆನ್ ಮಾಡಿಸಿದರು. ಸಾವಿರಾರು ಕಾರ್ಯಕರ್ತರು ಲೈಟ್ ಆನ್ ಮಾಡುವ ಮೂಲಕ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸಿದರು. ಇದೇ ಖುಷಿಯಲ್ಲಿ ನರೇಂದ್ರ ಮೋದಿ ಅವರು ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಕೂಗಿ ಗಮನ ಸೆಳೆದಿದ್ದರು.
ಬೇಲೂರು ತಾಲೂಕಿನ ಇಬ್ಬೀಡಿನಲ್ಲಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಮೋದಿ, ಹೊಯ್ಸಳರ ನಾಡು ಬೇಲೂರಿನ ಸಹೋದರ, ಸಹೋರಿಯರಿಗೆ ಸ್ವಾಗತ ಎಂದು ಹೇಳಿದ್ದಾರೆ. ಆಗ ಕಾರ್ಯಕರ್ತರು ಈ ಬಾರಿಯ ನಿರ್ಧಾರ ಬಿಜೆಪಿ ಎಂದು ಕೂಗಿದರು. ನಂತರ ಇದೇ ಜೋಷ್ ಮುಂದುವರೆಯಬೇಕು, ಹಾಸನದಲ್ಲಿ ಕಮಲ ಅರಳಬೇಕು ಎಂದು ಮೋದಿ ಹೇಳಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಿರೋಧಿಯಂತೆ ನಾಡಕ ಮಾಡುತ್ತಿವೆ. 2018ರ ಚುನಾವಣೆಯಲ್ಲಿ ಅವರ ಭಾಷಣ ನೋಡಿದರೆ ಗೊತ್ತಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೋರಿಕೆ ಜಗಳ ನಡೆಯುತ್ತಿರುತ್ತವೆ. ವಿಧಾನಸಭೆಯಲ್ಲಿ ಆ ಎರಡು ಪಕ್ಷಗಳು ಒಂದಾಗಿರುತ್ತವೆ, ಕಾಂಗ್ರೆಸ್‌ಗೆ ಹಾಕುವ ಮತ ಜೆಡಿಎಸ್‌ಗೆ ಹಾಕಿದಂತೆ. ಕಾಂಗ್ರೆಸ್‌ಗೆ ವೋಟ್ ಹಾಕಿದರೆ ರಿವರ್ಸ್ ಗೇರಿಗೆ ಹಾಕಿದಂತೆ ಎಂದು ಲೇವಡಿ ಮಾಡಿದ್ದರು.












Click it and Unblock the Notifications