ಸಿದ್ರಮ್ಮಯ್ಯರನ್ನು ಅಳ್ಳಾಡಿಸೋ ತಾಕತ್ತು ಯಾವನ್ಗೂ ಇಲ್ಲ: ಕೆ.ಎಂ.ಶಿವಲಿಂಗೇಗೌಡ ಹೀಗೆ ಹೇಳಿದ್ದು ಯಾರಿಗೆ & ಏಕೆ?
ಹಾಸನ, ಅಕ್ಟೋಬರ್, 31: ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಹೇಳಿಕೆಗೆ ಅರಸೀಕೆರೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೋಳಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಇದೇ ಪಾತ್ರವನ್ನು ಮಾಡಿಕೊಂಡು ಬಂದಿದ್ದಾರೆ ಎಂದು ಕುಟುಕಿದರು. ಇದೇ ವೇಳೆ ಬಂಡೆಯಂತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಅವತ್ತಿನ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಸಕ್ಸಸ್ ಆದೆವು ಅಂತಾ ಹೇಳಿಕೊಂಡು ಇದಕ್ಕೆ ಕೈ ಹಾಕಿದರೆ, ಅವರಿಗೆ ಯಾವುದೇ ಕಾರಣಕ್ಕೂ ಯಶಸ್ಸು ಸಿಗುವುದಿಲ್ಲ. ನಾನು ಎಲ್ಲಾ ಶಾಸಕರ ಒಡನಾಟದಲ್ಲಿದ್ದೇನೆ. ಒಬ್ಬ ಶಾಸಕನನ್ನು ಕರೆದುಕೊಂಡು ಹೋಗಿದ್ದೇವೆ ಅಂತಾ ಸ್ಟೇಟ್ಮೆಂಟ್ ಕೊಡಿಸಲಿ ನೋಡೋಣ. ನಾನು ಆಗ ರಮೇಶ್ ಜಾರಕಿಹೋಳಿ ಅವರಿಗೆ ಶಹಬ್ಬಾಸ್ ಗಿರಿ ಹೇಳುತ್ತೇನೆ ಎಂದರು.

ನಾನು ಏನೋ ಲೀಡರ್ ಆಗಬಹುದು ಅನ್ನುವ ಒಂದೇ ಒಂದು ಕಾರಣಕ್ಕೆ ಹೀಗೆ ಖಳನಾಯಕನ ಪಾತ್ರ ಮಾಡಬಾರದು. ಇದು ಒಳ್ಳೆಯದಲ್ಲ, ಸಾಧ್ಯತೆಯಿಲ್ಲದ ಬದುಕು. ಆಡಳಿತ ವ್ಯವಸ್ಥೆಯಲ್ಲಿ ಕೆಟ್ಟ ಅಭಿಪ್ರಾಯ ಬರುವುದಕ್ಕೆ ಸಂಚು ಮಾಡುತ್ತಿದ್ದಾರೆ. ರಮೇಶ್ ಜಾರಕಿಹೋಳಿ ಸೇರಿದಂತೆ ಬಿಜೆಪಿಯ ಯಾರ್ಯಾರು ಈ ಅಭಿಪ್ರಾಯಗಳನ್ನು ಹೇಳುತ್ತಾರೋ ಅವರೆಲ್ಲರೂ ಹುಚ್ಚರು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಪ್ರಶ್ನೆ ಈಗ ಇಲ್ಲ, ಸಿಎಂ ಇದ್ದಾರೆ. ನಮ್ಮದು ನೂರಾರು ವರ್ಷಗಳ ಇತಿಹಾಸ ಇರುವ ಪಕ್ಷ. ಯಾರು ಮುಖ್ಯಮಂತ್ರಿ ಆಗಬೇಕು ಅನ್ನುವ ತೀರ್ಮಾನ ಮಾಡಬೇಕಿರುವುದು ಹೈಕಮಾಂಡ್. ಸಿದ್ದರಾಯಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈಗ ಬಂಡೆಯಂತೆ ಸರ್ಕಾರ ಇದ್ದು, ಅವರು ಬಂಡೆಯ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಯಾರಿಂದಲೂ ಸಿದ್ದರಾಮಯ್ಯ ಅವರನ್ನು ಅಳ್ಳಾಡಿಸುವುದಕ್ಕೆ ಸಾಧ್ಯವಿಲ್ಲ ಎಂದರು.
ನಾನು ಯಾವಾಗಲೂ ಸಿದ್ದರಾಮಯ್ಯರ ಪರ
ಕಾಂಗ್ರೆಸ್ ಹೈಕಮಾಂಡ್ ನುಡಿದಂತೆ ನಡೆಯುವ ಪಕ್ಷ. ಹೈಕಮಾಂಡ್ ಬಯಸಿದರೆ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ವಸತಿ ಸಚಿವ ಜಮೀರ್ ಅಹ್ಮದ್ ದಾವಣಗೆರೆಯಲ್ಲಿ ಹೇಳಿದರು.
ಮಾಧ್ಯಮವದರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನನ್ನ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಇರದು. ಹೈಕಮಾಂಡ್ ಪಕ್ಷ ನಮ್ಮದು. ಈಗ ಸಿಎಂ ಖುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಕುಳಿತಿದ್ದಾರೆ. ಖಾಲಿಯಿದ್ದರೆ ಮಾತನಾಡಬಹುದು ಎಂದು ಹೇಳಿದರು.
ನಾನು ಯಾವಾಗಲೂ ಸಿದ್ದರಾಮಯ್ಯರ ಪರ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಊಟಕ್ಕೆ ಕರೆಯುತ್ತಾರೆ. ಪರಮೇಶ್ವರ ಮನೆಯಲ್ಲಿ ಊಟಕ್ಕೆ ಸೇರಿದ್ದರು, ನನ್ನನ್ನು ಕರೆದಿದ್ದರು. ಡಿ.ಕೆ.ಶಿವಕುಮಾರ್ ಅವರನ್ನೂ ಆಹ್ವಾನಿಸಿದ್ದರು. ನಾನು ಹೋಗಿಲ್ಲ ಅಂತಾ ಬೇರೆ ಅರ್ಥ ಬರುತ್ತಾ? ಸತೀಶ್ ಜಾರಕಿಹೊಳಿ, ಶಾಸಕರು ಫೋನ್ ಮಾಡಿದ್ದಾರೆ. ನಿನ್ನೆಯೂ ಸ್ನೇಹಿತರೊಬ್ಬರ ಮನೆಗೆ ಊಟಕ್ಕೆ ಸೇರಿದ್ದೆವು. ಸತೀಶ್ ಜಾರಕಿಹೊಳಿ ಅವರಿಗೆ ಯಾವ ಅಸಮಾಧಾನವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಮೇಶ್ ಜಾರಕಿಹೊಳಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್ ಮಾಜಿ ಮಂತ್ರಿಯಾಗುತ್ತಾರೆ ಎಂದು ಹೇಳಲು ತನಿಖಾಧಿಕಾರಿನಾ? ಇಲ್ಲವೇ ಜಡ್ಜಾ, 17 ಶಾಸಕರನ್ನು ಆಪರೇಷನ್ ಕಮಲ ಮಾಡಿ ಹೋಗಿ ಸರ್ಕಾರ ರಚಿಸಲು ಎಷ್ಟು ತಿಂಗಳಾಯ್ತು? ಏನೆಲ್ಲಾ ಸಂಕಷ್ಟ ಅನುಭವಿಸಿದರು? ಹೋದವರನ್ನೇ ಕೇಳಿ ಹೇಳುತ್ತಾರೆ. ರಮೇಶ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. 50 ಶಾಸಕರನ್ನು ಆಪರೇಷನ್ ಮಾಡುವುದು ಸುಲಭ ಸಾಧ್ಯನಾ? ನೀವೇ ಹೇಳಿ ಎಂದು ಪ್ರಶ್ನಿಸಿದರು.
ಯಾವ ಒಬ್ಬ ಶಾಸಕರೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಲ್ಲ. ಬಿಜೆಪಿಯ ಶಾಸಕರೇ ಕಾಂಗ್ರೆಸ್‌ಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಮೊದಲು ಅವರ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲಿ. ಯಾವ ಕಾಂಗ್ರೆಸ್ ಶಾಸಕ ಬಿಜೆಪಿಗೆ ಹೋಗಲು ಸಿದ್ದರಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಒಂಟಿಕಾಲ ಮೇಲೆ ನಮ್ಮ ಪಕ್ಷಕ್ಕೆ ಬರಲು ಬಿಜೆಪಿ ಶಾಸಕರು ಸಜ್ಜಾಗಿದ್ದಾರೆ ಎಂದರು.












Click it and Unblock the Notifications