ಮುಂದುವರೆದ ಹಾಸನ ಜೆಡಿಎಸ್ "ಟಿಕೆಟ್ ದಂಗಲ್": ಎಚ್.ಡಿ.ಕುಮಾರಸ್ವಾಮಿಗೆ ತಲೆನೋವು ತಂದಿಟ್ಟ ಎಚ್.ಡಿ.ರೇವಣ್ಣನ "ಆ" ನಿಲುವು
ಹಾಸನ, ಏಪ್ರಿಲ್, 10: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ದಂಗಲ್‌ಗೆ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಲೇ ಇದೆ. ಹಾಸನ ಟಿಕೆಟ್ ಯಾರಿಗೆ ಎಂಬ ಪ್ರಶ್ನೆಗೆ ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಉತ್ತರವನ್ನು ನೀಡಿದ್ದಾರೆ. ಇಷ್ಟಾದರೂ ಕೂಡ ಮಾಜಿ ಸಚಿವ ಎಚ್.ಡಿ.ರೇವಣ್ಣನ ಕುಟುಂಬದವರು ಕೊನೇ ಹಂತದ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ.
ಎಚ್.ಡಿ.ದೇವೇಗೌಡರನ್ನು ಇಂದು ಭೇಟಿ ಮಾಡಿದ ರೇವಣ್ಣ ಅಂತಿಮ ಹಂತದ ಪ್ರಯತ್ನವನ್ನು ಮಾಡಿದ್ದಾರೆ. ಇತ್ತ ಸ್ವರೂಪ್ ಹುಟ್ಟುಹಬ್ಬ ನಿಮಿತ್ತ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ಮಾಡಿಕೊಳ್ಳುವ ಮೂಲಕ ಇದೇ ವೇಳೆ ಟಿಕೆಟ್ ನಮಗೇ ಸಿಗುತ್ತದೆ ಅನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಆಕ್ರೋಶ ವ್ಯಕ್ತಪಡಿಸಿದ ಎಚ್.ಡಿ.ರೇವಣ್ಣ
ಹೌದು, ಕಳೆದೆರಡು ತಿಂಗಳಿನಿಂದ ಗೊಂದಲವಾಗಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಕಗ್ಗಾಂಟಾಗಿಯೇ ಉಳಿದಿದೆ. ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಾಸನದ ಟಿಕೆಟ್ ಸ್ವರೂಪ್‌ಗೇ ಎಂದು ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ ಅವರ ಈ ನಿಲುವು ಎಚ್.ಡಿ.ರೇವಣ್ಣನವರ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ. ಪುತ್ರರಿಬ್ಬರ ರಾಜೀನಾಮೆ ಕೊಡಿಸುತ್ತೇನೆ, ಭವಾನಿಗೇ ಟಿಕೆಟ್ ನೀಡದೇ ಹೋದರೆ ನನಗೂ ಟಿಕೆಟ್ ಬೇಡ ಎಂದು ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನೇ ಹೇಳಿದರೂ ಕುಮಾರಸ್ವಾಮಿ ತನ್ನ ನಿಲುವಿನಲ್ಲಿ ಬದಲಾಗದೇ ಇರುವುದು ರೇವಣ್ಣನವರನ್ನು ಕೆಂಡಾಮಂಡಲರಾಗುವಂತೆ ಮಾಡಿದೆ. ಇಷ್ಟೆಲ್ಲಾ ಬೆಳವಣಿಗೆ ಆದರೂ ಕೂಡ ಟಿಕೆಟ್ ಪಡೆದೇ ತೀರುತ್ತೇವೆ ಎಂದು ಎಚ್.ಡಿ.ರೇವಣ್ಣ ಅಂತಿಮ ಹಂತದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಗೊಂದಲಕ್ಕೆ ದೇವೇಗೌಡರು ತೆರೆ ಎಳೆಯುತ್ತರೆಯಾ ಅನ್ನುವುದನ್ನು ಕಾದುನೋಡಬೇಕಿದೆ.
ಮೌನಕ್ಕೆ ಶರಣಾದ ಎಚ್.ಡಿ.ಕುಮಾರಸ್ವಾಮಿ
ಇತ್ತ ರೇವಣ್ಣನವರ ನಡೆಯಿಂದ ಮಾಜಿ ಸಿ.ಎಂ. ಎಚ್.ಡಿ.ಕುಮಾರಸ್ವಾಮಿ ಕೂಡ ಕಂಗೆಟ್ಟು ಹೋಗಿದ್ದಾರೆ. ಸ್ವರೂಪ್‌ಗೆ ಟಿಕೆಟ್ ಘೋಷಣೆ ಮಾಡಿದರೆ ರೇವಣ್ಣನವರ ಕುಟುಂಬದ ನಿರ್ಧಾರ ಏನಾಗಿರಲಿದೆ ಅನ್ನುವ ಆತಂಕವೂ ಕುಮಾರಸ್ವಾಮಿಯವರ ಮುಂದಿದೆ. ಆದ್ದರಿಂದ ಇದೀಗ ಅವರು ಟಿಕೆಟ್ ತಲೆಬಿಸಿಯಿಂದ ಮೌನಕ್ಕೆ ಶರಣಾಗಿದ್ದಾರೆ.
ಎರಡೂ ಕುಟುಂಬಗಳ ಗದ್ದಲದ ನಡುವೆ ಇಂದು ಜೆಡಿಎಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಎಚ್.ಪಿ.ಸ್ವರೂಪ್ ಗೌಡ ಕಾರ್ಯಕರ್ತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬಳಿಕ ಮಾತನಾಡಿದ ಅವರು, ಜೆಡಿಎಸ್ ವರಿಷ್ಠರ ನಿರ್ಧಾರಕ್ಕೆ ನಾನು ಈಗಲೂ ಬದ್ದನಿದ್ದೇನೆ, ಹಾಗೆಯೇ ನನಗೇ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದೇನೆ ಎಂದರು.
ಕಳೆದ ಮೂರು ದಿನಗಳಿಂದ ಎಚ್.ಡಿ. ರೇವಣ್ಣನವರ ಕುಟುಂಬ ಮೌನಕ್ಕೆ ಶರಣಾಗುವ ಮೂಲಕ ಟೆಂಪಲ್ ರನ್ ಮುಂದುವರೆಸಿದೆ. ಈಗಾಗಲೇ ರೇವಣ್ಣನವರ ಪತ್ನಿಗೆ ಹಾಸನ ಟಿಕೆಟ್ ಕೊಡದದೇ ಹೋದ್ರೆ ಇಬ್ಬರೂ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಅನ್ನುವ ವಿಚಾರವನ್ನು ಕಾರ್ಯಕರ್ತರ ಬಳಿ ಹೇಳಿಕೊಂಡಿದ್ದಾರೆ. ಆದರೆ ಜೆಡಿಎಸ್ ವರಿಷ್ಠರು ಎಚ್.ಡಿ.ರೇವಣ್ಣನವರ ನಿಲುವಿಗೆ ಸ್ಪಂದಿಸುತ್ತಾರೋ, ಇಲ್ಲವೋ ಅನ್ನುವುದನ್ನು ಕಾದುನೋಡಬೇಕಿದೆ.
ಜೆಡಿಎಸ್ ವಿರುದ್ಧ ಎಂ.ಟಿ.ರಾಮಸ್ವಾಮಿ ಆಕ್ರೋಶ
ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಇತ್ತ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ತೊರೆದು ಹಲವು ಜನ ಜೆಡಿಎಸ್ ನಾಯಕರು ಅನ್ಯ ಪಕ್ಷಗಳತ್ತ ಮುಖ ಮಾಡಿದ್ದು, ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅರಕಲಗೂಡು ಶಾಸಕರಾಗಿದ್ದ ಎಂ.ಟಿ ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸೇರ್ಪಡೆಯಾಗಿದ್ದು, ಹಾಸನ ಜೆಡಿಎಸ್ ನಾಯಕರ ವಿರುದ್ದ ಇತ್ತೀಚೆಗಷ್ಟೇ ಕಿಡಿಕಾರಿದ್ದಾರೆ.
ಹಾಸನ ಸಿಂಹಾಸನ ಎಂದರೇ ಇವರ ಮನೆ ಆಸ್ತಿನಾ, ಇವರು ಒಂದು ಕ್ಷೇತ್ರದ ಸಮಸ್ಯೆ ಬಗೆಹರಿಸಲು ಆಗದವರು ಇನ್ನು ರಾಜ್ಯದ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ? ಎಂದು ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ರೈತರ ಹೆಸರಿನ ಮೇಲೆ ನಕಲಿ ಸಾಲ ಮಾಡಿಸಿರುವುದು ಸತ್ಯ. ಸತ್ಯಾಂಶ ಹೇಳಲು ಹೊರಟ್ರೆ ಇವರಿಗೆ ಸಿಟ್ಟು ಬರುತ್ತೆ. ಹಾಸನ ಸಿಂಹಾಸನ ಎಂದ್ರೆ ಇವ್ರ ಮನೆ ಆಸ್ತಿ ಅನ್ಕೊಂಡಿದ್ದಾರಾ..? ಇವರು ಈ ಒಂದು ಕ್ಷೇತ್ರದ ಸಮಸ್ಯೆ ಬಗೆಹರಿಸಲು ಆಗದವರು ಇನ್ನು ಇವರು ರಾಜ್ಯದ ಸಮಸ್ಯೆ ಬಗೆಹರಿಸ್ತಾರಾ? ಎಂಬುದು ಅನುಮಾನ ಎಂದು ವ್ಯಂಗ್ಯವಾಡಿದ್ದರು.












Click it and Unblock the Notifications