ಜೆಡಿಎಸ್ ಹಿಡಿತದಲ್ಲಿರುವ ಹಾಸನ ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿ
ಹಾಸನ, ಏಪ್ರಿಲ್ 1: ಹಾಸನದ ಡಿಸಿಸಿ ಬ್ಯಾಂಕ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಶುಕ್ರವಾರ ರಾತ್ರಿಯೇ ಬ್ಯಾಂಕ್ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಶನಿವಾರವೂ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಬ್ಯಾಂಕ್ ಕಾರ್ಯ ನಿರ್ವಹಣೆ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಡಿ ರೇವಣ್ಣ ಅವರ ಆಪ್ತ ಸೋಮನಹಳ್ಳಿ ನಾಗರಾಜ್ ಅಧ್ಯಕ್ಷರಾಗಿರುವ ಹಾಸನದ ಡಿಸಿಸಿ ಬ್ಯಾಂಕ್ ಹಾಸನ ಜಿಲ್ಲೆಯಲ್ಲಿ 34 ಶಾಖೆಗಳನ್ನು ಹೊಂದಿದ್ದು, ವಾರ್ಷಿಕ ಸುಮಾರು 1,700 ಕೋಟಿ ರೂ. ವಹಿವಾಟು ನಡೆಸುತ್ತಿದೆ ಎನ್ನಲಾಗಿದೆ.

ಹಾಸನ ಡಿಸಿಸಿ ಬ್ಯಾಂಕ್ ಮೂರು ಲಕ್ಷಕ್ಕೂ ಅಧಿಕ ಖಾತೆದಾರರನ್ನು ಹೊಂದಿದ್ದು, ಒಟ್ಟು 13 ನಿರ್ದೇಶಕರನ್ನು ಹೊಂದಿರುವ ಬ್ಯಾಂಕ್ ಜೆಡಿಎಸ್ ನಾಯಕರ ಹಿಡಿತವಿದೆ ಎನ್ನಲಾಗಿದೆ. ಕಳೆದ ಸಾಲಿನಲ್ಲಿ ಬ್ಯಾಂಕ್ ಅಂದಾಜು 565 ಕೋಟಿ ರೂ. ಕೃಷಿಯೇತರ, 1,000 ಕೋಟಿ ರೂಪಾಯಿಗೂ ಅಧಿಕ ಕೃಷಿ ಸಾಲ ವಿತರಣೆ ಮಾಡಿದೆ ಎನ್ನಲಾಗಿದೆ. ಅಲ್ಲದೇ ಅಂದಾಜು 1.70 ಲಕ್ಷ ರೂಪಾಯಿ ರೈತರಿಗೆ ಕೃಷಿ ಕೃಷಿಯೇತರ ಸಾಲ ಮಂಜೂರು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬ್ಯಾಂಕ್‌ನ ಎಲ್ಲ ಸಿಬ್ಬಂದಿ ಸಮ್ಮುಖದಲ್ಲಿ ದಾಖಲೆ ಪತ್ರ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ರಾಜ್ಯದಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಸನದ ಡಿಸಿಸಿ ಬ್ಯಾಂಕ್ ಮೇಲೆ ದಾಳಿ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.












Click it and Unblock the Notifications