ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿ
Recommended Video

ಹಾಸನ, ಮಾರ್ಚ್ 28: ಸಚಿವ ಎಚ್‌ಡಿ ರೇವಣ್ಣ ಮನೆಯ ಮೇಲೆ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಎಚ್.ಡಿ. ರೇವಣ್ಣ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಯ ಹಾಸನ ಕಚೇರಿ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಹಾಸನದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಅವರ ವಿಚಾರಣೆ ನಡೆಸಲಾಗುತ್ತಿದೆ. ಹಾಗೇ, ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಡತಗಳ ಪರಿಶೀಲನೆ ಮಾಡಲಾಗುತ್ತಿದೆ.
ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿರುವ ಮನೆ ಮೇಲೆ ಬೆಳಗ್ಗೆ ಐಟಿ ದಾಳಿ ನಡೆದಿದೆ. ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗ ಅಶೋಕ್ ಮನೆ ಮೇಲೆಯೂ ದಾಳಿ ನಡೆದಿದೆ. ನಸುಕಿನ ಜಾವದಿಂದ ಪುಟ್ಟರಾಜು ನಿವಾಸ, ಸಂಬಂಧಿಗಳ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಬೆಂಗಳೂರಿನ ಹಲವು ಉದ್ಯಮಿಗಳ ಮನೆ ಮೇಲೆ ಬುಧವಾರ ರಾತ್ರಿ ಐಟಿ ದಾಳಿ ನಡೆದಿದೆ. 10ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿಯಾಗಿದೆ.
ಬುಧವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ, ಬಿಜೆಪಿಯ ಆಪ್ತ ಮೂಲಗಳಿಂದ ನನಗೆ ಫೋನ್ ಕರೆ ಬಂದಿದ್ದು, ಕಾಂಗ್ರೆಸ್, ಜೆಡಿಎಸ್ ಅಭಿಮಾನಿಗಳನ್ನು ಗುರಿ ಮಾಡಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ.
ಪಕ್ಷ ಬೆಂಬಲಿಗರ ಮೇಲೆ ದಾಳಿ ನಡೆಸಿ ಎಷ್ಟು ಹಣ ತೆಗೆದುಕೊಂಡು ಹೋಗುತ್ತಾರೆ ನೋಡುತ್ತೇನೆ. ಆದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ನಾನು ಕೂಡ ಪಶ್ಚಿಮ ಬಂಗಾಳ ಸಿಎಂರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.











Click it and Unblock the Notifications