ಹಾಸನ; ಕಾಳಿ ವಿಗ್ರಹಕ್ಕೆ ಹಾನಿ, ವರದಿ ಕೇಳಿದ ಪ್ರಧಾನಿ ಕಚೇರಿ
ಹಾಸನ, ನವೆಂಬರ್ 22 : ಇತಿಹಾಸ ಪ್ರಸಿದ್ಧ ದೊಡ್ಡಗದ್ದವಳ್ಳಿ ಗ್ರಾಮದ ಲಕ್ಷ್ಮೀ ದೇವಿ ದೇವಾಲಯದ ಕಾಳಿ ವಿಗ್ರಹಕ್ಕೆ ಹಾನಿ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯ ಸೂಚನೆ ನೀಡಿದೆ.
ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀ ದೇವಿ ದೇವಾಲಯದಲ್ಲಿನ ಕಾಳಿ ವಿಗ್ರಹಕ್ಕೆ ಗುರುವಾರ ದುಷ್ಕರ್ಮಿಗಳು ಹಾನಿ ಮಾಡಿದ್ದರು. ಪ್ರಧಾನಿ ಕಚೇರಿ ಪುರಾತತ್ವ ಇಲಾಖೆಯಿಂದ ಈ ಬಗ್ಗೆ ವರದಿ ಕೇಳಿದೆ.
ಭಾರತ ಪುನರುತ್ಥಾನ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳ ಕಚೇರಿಗೆ ದೂರು ನೀಡಿತ್ತು. ಹೀಗಾಗಿ ಕಚೇರಿಯಿಂದ ಈ ಬಗ್ಗೆ ವರದಿ ನೀಡುವಂತೆ ಸೂಚನೆ ಕೊಡಲಾಗಿದೆ.

ಸುಮಾರು 906 ವರ್ಷಗಳ ಇತಿಹಾಸ ಇರುವ ಪುರಾತನ ದೇವಾಲಯ ಇದಾಗಿತ್ತು. ಚಥುಷ್ಕೂಟ ಶೈಲಿಯಲ್ಲಿ ನಿರ್ಮಾಣಗೊಂಡ ದಕ್ಷಿಣ ಭಾರತದ ಮೊದಲ ದೇವಾಲಯ ಎಂಬ ಹೆಗ್ಗಳಿಕೆ ಲಕ್ಷ್ಮೀ ದೇವಿ ದೇವಾಲಯದ್ದಾಗಿದೆ.
ಶುಕ್ರವಾರ ಅರ್ಚಕರು ಪೂಜೆಗಾಗಿ ಆಗಮಿಸಿದಾಗ ಕಾಳಿ ದೇವಿಯ ವಿಗ್ರಹ ನೆಲಕ್ಕೆ ಉರುಳಿತ್ತು. ಮೂರು ಭಾಗವಾಗಿತ್ತು. ನಿಧಿ ಆಸೆಗಾಗಿ ಕಳ್ಳರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.
ಈ ದೇವಾಲಯದಲ್ಲಿ ನಾಲ್ಕು ಗರ್ಭಗುಡಿಗಳಿವೆ. ಕಾಳಿ ವಿಗ್ರಹದ ಮುಂದೆ ಕಾಲಬೈರವನ ವಿಗ್ರಹ ಇದೆ. ಲಕ್ಷ್ಮೀ ದೇವಾಲಯದ ಮುಂದೆ ಶಿವನ ಲಿಂಗವಿದೆ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ನಡೆದಿರುವ ಘಟನೆ ಈಗ ಪ್ರಧಾನಿ ಕಚೇರಿ ತಲುಪಿದೆ.












Click it and Unblock the Notifications