ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಂಡ ಸರ್ಕಾರಿ ಅಧಿಕಾರಿ, ಫೋಟೋ ವೈರಲ್
ಹಾಸನ, ನವೆಂಬರ್, 9: ಹಾಸನದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಂಡಿದ್ದು, ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳೆಂದರೆ ಅಲ್ಲಿ ಬರೀ ಲಂಚಬಾಕರೇ ಇರುತ್ತಾರೆ ಎನ್ನುವುದು ಜನರ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಇದಕ್ಕೆ ಕಾರಣ ಸಣ್ಣಸಣ್ಣ ಕೆಲಸಗಳಿಗೂ ಸರ್ಕಾರಿ ಕಚೇರಿಯ ಅಧಿಕಾರಿಗಳು ಜನರನ್ನು ಅಲೆದಾಡಿಸುವುದಲ್ಲದೆ, ಅವರ ಬಳಿ ಹಣವನ್ನು ಪೀಕುತ್ತಿರುವ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ.

ಎಲ್ಲೆಡೆ ಲಂಚ ತಾಂಡವ ಆಡುತ್ತಿರುವುದರ ಮಧ್ಯೆ ಹಾಸನದ ಬಿಇಒ ಕಛೇರಿಯ ಅಧೀಕ್ಷಕ ಡಿಎಸ್ ಲೋಕೇಶ್ ಅವರು ತಮ್ಮ ಟೇಬಲ್ ಮೇಲೆ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಳ್ಳುವ ಮೂಲಕ ಪ್ರಾಮಾಣಿಕತೆ ಮೆರೆಯುತ್ತಿದ್ದು, ಈ ವಿಚಾರ ಸಾಮಾಜಿಕ ಜಲಾತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಹಿಂದೆ ಮಾಜಿ ಪ್ರಧಾನಿ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಲೋಕೇಶ್ ಅವರು ತಮ್ಮ ಜನಸ್ನೇಹಿ ಕೆಲಸದಿಂದ ಮೆಚ್ಚುಗೆ ಗಳಿಸಿದ್ದರು. ಇದೀಗ ಪ್ರಮೋಷನ್ ಪಡೆದು ಬಿಇಓ ಕಛೇರಿಯ ಅಧೀಕ್ಷರಾಗಿದ್ದು, ಅವರು ಕರ್ತವ್ಯ ಆರಂಭಿಸಿದ ದಿನದಿಂದ ಹೀಗೊಂದು ಬೋರ್ಡ್ ಹಾಕಿಕೊಂಡು ಕೆಲಸ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಇಂತಹ ಪ್ರಾಮಾಣಿಕ ಅಧಿಕಾರಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿ ಎನ್ನುವುದೇ ಜನರ ಆಶಯವಾಗಿದೆ.












Click it and Unblock the Notifications