Hasanamba utsav 2023: ಹಾಸನಾಂಬೆ ದರ್ಶನ ಪಡೆದ ಮಾಜಿ ಸಿಎಂ HDK ಫ್ಯಾಮಿಲಿ
ಹಾಸನ, ನವೆಂಬರ್, 07: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬ ದೇಗುಲದ ಬಾಗಿಲು ನವೆಂಬರ್ 2ರಂದು ತೆರೆದಿದ್ದು, ಭಕ್ತರಿಗೆ ದರ್ಶನಕ್ಕೆ ನವೆಂಬರ್ 3ರಿಂದ ಅವಕಾಶ ನೀಡಲಾಗಿತ್ತು. ಅಂದಿನಿಂದ ಹಲವು ಗಣ್ಯರು, ರಾಜಕೀಯ ನಾಯಕರು ಕೂಡ ತಾಯಿ ಹಾಸನಾಂಬೆ ದರ್ಶನ ಪಡೆಯುತ್ತಲೇ ಇದ್ದಾರೆ. ಹಾಗೆಯೇ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಆಗಮಿಸಿ ದರ್ಶನ ಪಡೆದಿದ್ದಾರೆ.
ಮಂಗಳವಾರ (ನವೆಂಬರ್ 07) ಪತ್ನಿ ಜೊತೆಗೆ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತವು ಮಂಗಳವಾದ್ಯ, ಕಲಾತಂಡಗಳ ನಾದ ಸ್ವರದೊಂದಿಗೆ ಭವ್ಯ ಸ್ವಾಗತ ನೀಡಿತು. ಈ ವೇಳೆ ಕುಮಾರಸ್ವಾಮಿ ಅವರಿಗೆ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಸಾಥ್ ನೀಡಿದರು. ಇನ್ನು ಕುಮಾರಸ್ವಾಮಿ ಅವರು ಇಂದಿನಿಂದ ಎರಡು ದಿನ ಹಾಸನದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಸನ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಶಾಸಕರು ಹಾಗೂ ಪರಿಷತ್ ಸದಸ್ಯರ ಸಭೆ ನಡೆಯಲಿದ್ದು, ಇಂದು ಸಂಜೆ ವೇಳೆಗೆ ಜೆಡಿಎಸ್ ಶಾಸಕರು ಹಾಗು ವಿಧಾನ ಪರಿಷತ್ ಸದಸ್ಯರು ಹಾಸನ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಹಾಸನಾಂಬೆ ದರ್ಶನಕ್ಕೆ ಸಿಎಂ ಆಗಮನ
ಸಿಎಂ ಸಿದ್ದರಾಮಯ್ಯ ಅವರು 5ನೇ ದಿನವಾದ ಇಂದು ಹಾಸನಾಂಬೆ ದರ್ಶನಕ್ಕೆ ಬಂದಿದ್ದು, ಜಿಲ್ಲಾಡಳಿತದಿಂದ ಅವರಿಗೆ ಮಂಗಳ ವಾದ್ಯಗಳು, ಛತ್ರಿ ಚಾಮರ, ನಾದ ಸ್ವರಗಳೊಂದಿಗೆ ಭವ್ಯ ಸ್ವಾಗತ ಕೋರಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡ ಸೇರಿ ಸಾಥ್ ನೀಡಿದರು.
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಉತ್ತಮವಾಗಿ ಆಗಲಿ ಎಂದು ಹಾಸನಾಂಬೆಗೂ ಪ್ರಾರ್ಥನೆ ಮಾಡುತ್ತೇನೆ ಎಂದರು. ಇನ್ನು ಕೇವಲ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ. ಎಲ್ಲ ಬರೀ ಸುಳ್ಳೇ ಹೇಳಿಕೊಂಡು ಬರುತ್ತಿದ್ದಾರೆ. ಅದು ಬಿಟ್ಟರೆ ಅವರಿಗೆ ಬೇರೆ ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬರದ ವಿಚಾರದಲ್ಲಿ ನಾವು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿಲ್ಲ. ದುಡ್ಡು ಕೇಳುತ್ತಿದ್ದೇವೆ, ಕೇಳಬೇಕೆ ಬೇಡ್ವಾ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ, ಕೇಂದ್ರ ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಬರ ಬಂದರೆ ಕೇಂದ್ರದ ಜವಾಬ್ದಾರಿಯು ಇರುತ್ತದೆ. ಕೇಂದ್ರಕ್ಕೆ ತೆರಿಗೆ ಮೂಲಕ ಹಣ ಕೊಡುವುದೇ ರಾಜ್ಯಗಳು. ನಮಗೆ ಸಂಕಷ್ಟ ಎದುರಾದಾಗ ನೆರವಾಗಬೇಕಾಗಿದ್ದು ಕೇಂದ್ರದ ಜವಾಬ್ದಾರಿಯಾಗಿದೆ. 33,700 ಕೋಟಿ ರೂಪಾಯಿಗಳ ಬೆಳೆ ನಷ್ಟವಾಗಿದ್ದು, ಕೇಂದ್ರದ ಬಳಿ 17 ಸಾವಿರ ಕೋಟಿ ಕೇಳಿದ್ದೇವೆ. ರೈತರು ಸಂಕಷ್ಟದಲ್ಲಿದ್ದಾರೆ, ಬೇಗ ಹಣ ಕೊಡಿ ಎಂದು ಕೇಳುತ್ತಿದ್ದೇವೆ ಅಷ್ಟೇ ಎಂದರು.
ಸಿದ್ದರಾಮಯ್ಯ ಮೋದಿ ವಿರುದ್ಧ ದುರಹಂಕಾರದಿಂದ ಮಾತುಗಳನ್ನಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿಯವರು ನನ್ನ ಬಗ್ಗೆ ಮಾತನಾಡಬಹುದಾ? ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡುವುದು ಏನಿರುತ್ತದೆ? ಮೊದಿಯವರಿಗೆ ನಮ್ಮ ಬಗ್ಗೆ ಭಯ ಇರಬೇಕು. ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶೇಮ್‌ಲೆಸ್ ಪಾರ್ಟಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್ ಹಿಮ್‌ಸೆಲ್ಫ್ ಈಸ್ ಎ ಶೇಮ್‌ಲೆಸ್ ಎಂದು ಲೇವಡಿ ಮಾಡಿದರು. ಯತ್ನಾಳ್ ಏನು ಬಹಳ ಸದ್ಗುಣ ಇರುವ ವ್ಯಕ್ತೀನಾ? ಅವರಿಗೆ ಬಿಜೆಪಿಯವರೇ ನಡವಳಿಕೆ ಸರಿ ಇಲ್ಲ ಎಂದು ನೋಟಿಸ್ ಕೊಟ್ಟಿಲ್ವಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಮೌಢ್ಯ ವಿರೋಧಿ ಕಾನೂನು ಬಗ್ಗೆ ಪ್ರತಿಕ್ರಿಯಿಸಿ, ಹಾಸನಾಂಬೆ ಜಾತ್ರೆಯನ್ನು ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ನನಗೆ ಮೌಢ್ಯಗಳನ್ನು ಆಚರಿಸುವುದು ರೂಢಿಯಿಲ್ಲ. ದೇವರ ಬಗ್ಗೆ ನನಗೆ ನಂಬಿಕೆ ಇದೆ. 99.99% ಜನರೂ ಕೂಡ ದೇವರನ್ನು ನಂಬುತ್ತಾರೆ ಎಂದರು.












Click it and Unblock the Notifications