ಹಾಸನದಲ್ಲಿ ಮಿಕ್ಸಿ ಸ್ಫೋಟ ಪ್ರಕರಣ: ಮೈಸೂರಿನಿಂದ ಆಗಮಿಸಿದ ಎಫ್‌ಎಸ್‌ಎಲ್ ತಂಡ
ಹಾಸನ, ಡಿಸೆಂಬರ್, 27: ಹಾಸನದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಸ್ಫೋಟವಾಗಿತ್ತು. ಘಟನೆಯಲ್ಲಿ ಅಂಗಡಿ ಮಾಲೀಕ ಶಶಿ ಗಂಭೀರ ಗಾಯಗೊಂಡಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ಆತನನ್ನು ಚಿಕಿತ್ಸೆಗೆ ದಾಖಲಾಗಿದ್ದರು. ಇದೀಗ ಮೈಸೂರಿನಿಂದ ಹಾಸನಕ್ಕೆ ಎಫ್‌ಎಸ್‌ಎಲ್ ತಂಡ ಆಗಮಿಸಿದ್ದು, ಘಟನಾ ಸ್ಥಳದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಲ್ಲದೇ ಸ್ಫೋಟ ಸ್ಥಳದಲ್ಲಿದ್ದ ಕೆಲ ವಸ್ತುಗಳನ್ನು ಸಂಗ್ರಹಿಸಿದೆ. ಸ್ಪೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪ್ರಕರಣವೂ ಕೂಡ ದಾಖಲಾಗಿದೆ.
ಹಾಸನ ಎಸ್‌ಪಿ ಹರಿರಾಂ ಶಂಕರ್ ಕೂಡ ಎಫ್‌ಎಸ್‌ಎಲ್ ತಂಡಕ್ಕೆ ಸಾಥ್ ನೀಡಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಶಶಿ ಎಂಬಬುವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಅನುಮಾನದ ಮೇಲೆ ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಹಾಸನ ಎಸ್‌ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು. ಹಾಗೆಯೇ ಸ್ಪೋಟದಲ್ಲಿ ಆಂತರಿಕ ಭದ್ರತೆಗೆ ಧಕ್ಕೆಯಾಗುವ ಯಾವುದೇ ಸುಳಿವು ಇರುವ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮಿಕ್ಸಿ ಸ್ಫೋಟ, ಗ್ಲಾಸ್ ಪುಡಿ.. ಪುಡಿ
ಎರಡು ದಿನಗಳ ಹಿಂದೆ ಡಿಟಿಡಿಸಿ ಕೊರಿಯರ್ ಕಚೇರಿ ಮಿಕ್ಸಿ ಬಾಕ್ಸ್‌ವೊಂದು ಪಾರ್ಸಲ್ ಬಂದಿತ್ತು. ಅಂಗಡಿ ಮಾಲೀಕ ಶಶಿ ಬಾಕ್ಸ್‌ನಲ್ಲಿ ನಮೂದಿಸಲಾದ ಹೆಸರಿಗೆ ನೀಡಿದ್ದರು. ಆದರೆ ಆ ವ್ಯಕ್ತಿ ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಡಿಟಿಡಿಸಿ ಅಂಗಡಿಗೆ ವಾಪಾಸ್ ನೀಡಿದ್ದಾನೆ. ವಾಪಸ್ ಪಡೆಯುವ ವೇಳೆ ಶಶಿ ಮಿಕ್ಸಿ ಆನ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಿಕ್ಸಿ ಸ್ಫೋಟಗೊಂಡ ತೀವ್ರತೆಗೆ ಕೊರಿಯರ್ ಕಚೇರಿಯ ಗ್ಲಾಸ್ ಪುಡಿ ಪುಡಿಯಾಗಿದ್ದು, ಗೋಡೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಮಾಲೀಕ ಶಶಿ ಅವರ ಕೈ, ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಸ್‌ಪಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್‌ಪಿ ಹರಿರಾಮ್ ಶಂಕರ್, ಕೆ.ಆರ್ ಪುರಂನ ಡಿಟಿಡಿಸಿ ಕೊರೊಯರ್ ಶಾಪ್‌ನಲ್ಲಿ ಮಿಕ್ಸಿ ಸ್ಫೋಟ ಸಂಭವಿಸಿದೆ. ಕೊರಿಯರ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿದೆ ಎನ್ನುವ ಮಾಹಿತಿ ಇದೆ. ಕೊರಿಯರ್ ಆಫೀಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ದೇಹದ ನಾಲ್ಕು ಭಾಗದಲ್ಲಿ ಪೆಟ್ಟಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ. ಮಿಕ್ಸಿಯ ಬ್ಲೇಡ್‌ನಿಂದ ಅವರಿಗೆ ಪೆಟ್ಟಾಗಿದೆ ಎಂದು ಮಾಹಿತಿ ನೀಡಿದ್ದರು.
ಹಾಸನದಲ್ಲಿ ಕೊರಿಯರ್ ಮೂಲಕ ಬಂದಿದ್ದ ಮಿಕ್ಸಿ ಸ್ಫೋಟ: ವ್ಯಕ್ತಿಗೆ ಗಂಭೀರ ಗಾಯ












Click it and Unblock the Notifications