Property Row: ಒಂದೇ ಸೈಟ್ ಇಬ್ಬರ ಹೆಸರಿನಲ್ಲಿ: ಮೋಸ ಮಾಡಿದವ್ರನ್ನ ಇಂಡಿಯಾಗೆ ತೋರಿಸ್ತೀನಿ ಎಂದ ನಟ ಯಶ್ ತಾಯಿ
ಹಾಸನ, ಫೆಬ್ರವರಿ 2: ಇತ್ತೀಚಿನ ದಿನಗಳಲ್ಲಿ ಆಸ್ತಿ ವಿಚಾರವಾಗಿ ಗಲಾಟೆಗಳು ನಡೆದು ಅವುಗಳು ಕೊನೆ ಬೇರೆ ತಿರುವು ಪಡೆದಿರುವ ಉದಾಹರಣೆಗಳಿವೆ. ಹಾಗೆಯೇ ಇದೀಗ ಹಾಸನದಲ್ಲಿ ನಟ ಯಶ್ ತಾಯಿ ಪುಷ್ಪಾ ಹಾಗೂ ದೇವರಾಜ್ ನಡುವಿನ ಜಾಗದ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಈ ಕುರಿತು ಪುಷ್ಪಾ ಅವರು ಮತ್ತೆ ಪ್ರತಿಕ್ರಿಯಿಸಿ ಆಕ್ರೋಶ ಹೊರಹಾಕಿದ್ದಾರೆ.
ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ದೇವರಾಜ್ ನಡುವೆ ನಡೆಯುತ್ತಿರುವ ಜಾಗದ ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಒಂದೇ ನಿವೇಶನಕ್ಕೆ ಎರಡು ಜನರಿಗೆ ಪ್ರತ್ಯೇಕವಾಗಿ ಖಾತೆ, ಸರ್ವೆ ನಂಬರ್ ಹಾಗೂ ಇ-ಸ್ವತ್ತು ದಾಖಲೆಗಳನ್ನು ನೀಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆಯೇ ಎಂಬ ಪ್ರಶ್ನೆ ಇದೀಗ ತೀವ್ರವಾಗಿ ಚರ್ಚೆ ಆಗುತ್ತಿದೆ.

ನಿವೇಶನ ತಮ್ಮದೇ ಎನ್ನುವ ಕುರಿತು ಪುಷ್ಪಾ ಅವರು 1982ರಿಂದಲೂ ಇರುವ ದಾಖಲೆಗಳನ್ನು ಮುಂದಿಟ್ಟು ಮಾತನಾಡಿದ್ದಾರೆ. ಜಾಗ ಖರೀದಿ ಸಂದರ್ಭದಲ್ಲಿ ಎಲ್ಲಾ ಕಾನೂನು ದಾಖಲೆಗಳನ್ನು ಪರಿಶೀಲಿಸಿ ವಕೀಲರ ಸಲಹೆಯೊಂದಿಗೆ ವ್ಯವಹಾರ ನಡೆದಿತ್ತು. 1982ರಿಂದ ಸುಮಾರು ನಾಲ್ಕು ದಶಕಗಳ ಕಾಲ ಯಾವುದೇ ವ್ಯಾಜ್ಯ ಇಲ್ಲದೇ ಇದ್ದ ವಿಷಯ ಈಗ ಏಕೆ ಹೊರಬರುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, 1982ರಲ್ಲಿ ಕೆ.ಪಿ. ಶ್ರೀಮತಿ ಎಂಬವರು ಈ ಜಾಗವನ್ನು ಖರೀದಿಸಿದ್ದು, ಸುಮಾರು 23 ವರ್ಷಗಳ ಕಾಲ ಅವರ ಸ್ವಾಧೀನದಲ್ಲಿತ್ತು. ಬಳಿಕ 2007ರಲ್ಲಿ ಗಿರೀಶ್ ಕುಮಾರ್ ಮಹಲಿಂಗಪ್ಪ ಅವರು ಜಾಗವನ್ನು ಖರೀದಿ ಮಾಡಿಕೊಂಡು 2020ರವರೆಗೆ ಮಾಲೀಕರಾಗಿದ್ದರು. ಆ ಬಳಿಕ 2020ರಿಂದ ಈ ಜಾಗವು ತಮ್ಮ ವಶದಲ್ಲಿದೆ ಎಂದು ಪುಷ್ಪಾ ಅವರು ತಿಳಿಸಿದ್ದಾರೆ.
ದೇವರಾಜ್ ಅವರ ಮಾತಿನಂತೆ ಜಾಗ ತಮ್ಮದೆ ಎನ್ನುವುದಾದರೆ, ಉಪ ನೋಂದಣಿ ಕಚೇರಿಯಲ್ಲೇ ದೋಷ ನಡೆದಿದೆಯೇ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಒಂದೇ ಜಾಗಕ್ಕೆ ಎರಡು ದಾಖಲೆಗಳು ಸೃಷ್ಟಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಅಂತಲೂ ಹೇಳಿದ್ದಾರೆ.
ಮತ್ತೊಂದೆಡೆ, ದೇವರಾಜ್ ಕೂಡ ತಮ್ಮ ಬಳಿ ಜಾಗಕ್ಕೆ ಸಂಬಂಧಿಸಿದ ದಾಖಲೆಗಳಿದ್ದು, 2020ರಲ್ಲಿ ಲಕ್ಷ್ಮಮ್ಮ ಅವರಿಂದ ಜಿಪಿಎ ಪಡೆದುಕೊಂಡಿರುವುದಾಗಿ ಹೇಳುತ್ತಿದ್ದಾರೆ. ಈ ಪರಸ್ಪರ ವಿರೋಧಿ ದಾಖಲೆಗಳ ಕಾರಣದಿಂದ ಜಾಗದ ವಿವಾದ ಮತ್ತಷ್ಟು ಗೊಂದಲದ ಸ್ವರೂಪ ಪಡೆದುಕೊಂಡಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಸರ್ಕಾರಿ ಕಚೇರಿಗಳ ದಾಖಲೆಗಳ ಪರಿಶೀಲನೆ ಹಾಗೂ ಕಾನೂನು ಪ್ರಕ್ರಿಯೆಯತ್ತ ಎಲ್ಲರ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಸತ್ಯಾಂಶ ಏನೆಂಬುದು ಸ್ಪಷ್ಟವಾಗಲಿದೆ ಎನ್ನಲಾಗುತ್ತಿದೆ.












Click it and Unblock the Notifications