Hasanamba Jatra Mahotsav 2023: ನವೆಂಬರ್ 2ರಿಂದ ಆರಂಭ, ದಿನದ 24 ಗಂಟೆಯೂ ತಾಯಿ ದರ್ಶನಕ್ಕೆ ಅವಕಾಶ
ಹಾಸನ, ಆಗಸ್ಟ್, 16: ನವೆಂಬರ್ 2ರಿಂದ 15ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಬಾರಿ ದಿನದ 24 ಗಂಟೆಯೂ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ತಿಳಿಸಿದ್ದಾರೆ.
ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ಹಾಸನಾಂಬೆ ದರ್ಶನ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ವನ್ನು ತೆಗೆದುಕೊಳ್ಳಲಾಗಿದೆ. ಇಂದಿನಿಂದಲೇ (ಆಗಸ್ಟ್ 16) ಮಹೋತ್ಸವದ ಸಿದ್ಧತೆ ಆರಂಭ ಮಾಡಲು ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ರಾಜಣ್ಣ ಅವರು ಸೂಚನೆ ನೀಡಿದರು.

ಹಾಸನಾಂಬೆ ತಾಯಿ ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹಾಗೆಯೇ ಈ ಬಾರಿ ನವೆಂಬರ್ 2ರಿಂದ 15ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಮೊದಲ ಹಾಗೂ ಅಂತಿಮ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಅದರಲ್ಲೂ ಉತ್ತರ ಕರ್ನಾಟಕದಿಂದಲೂ ಹೆಚ್ಚು ಭಕ್ತರು ಬರುವ ಸಾಧ್ಯತೆಯಿದೆ. ಹಾಗಾಗಿ ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್‌ಪಿ ಹರಿರಾಮ್ ಶಂಕರ್, ಸಿಇಓ ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆ
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲು ಈ ವರ್ಷ ನವೆಂಬರ್ 2ರಂದು ಸಂಪ್ರದಾಯ ಬದ್ಧವಾಗಿ ತೆರೆಯಲಿದೆ. ಇತಿಹಾಸ ಪ್ರಸಿದ್ಧ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ ನವೆಂಬರ್ 2ರಿಂದ ಪ್ರಾರಂಭವಾಗಲಿದೆ ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಇತ್ತೀಚೆಗಷ್ಟೇ ತಿಳಿಸಿದ್ದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ನಿರ್ವಹಿಸುವಂತೆ ಸೂಚನೆ ನೀಡಿದ್ದರು.
2023 ಪ್ರಸಕ್ತ ವರ್ಷದಲ್ಲಿ ವೆಂಬರ್ 2ರಂದು ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತಿದ್ದು, ದೇವರ ದರ್ಶನಕ್ಕೆ ರಾಜ್ಯದ ವಿವಿಧ ಭಾಗದಿಂದ ಜನರು ಆಗಮಿಸುತ್ತಾರೆ. ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ದರ್ಶನ ಪಡೆಯಲು ಅಗತ್ಯ ಸಿದ್ಧತೆಗಳನ್ನು ಮಾಡಬೇಕು ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದರು.
ಅಧಿಕಾರಿಗಳು ಈಗಿನಿಂದಲೇ ಕೆಲಸಗಳಿಗೆ ನಿಯಮಾನುಸಾರ ಟೆಂಡರ್ ಕರೆದು ಕರ್ತವ್ಯ ನಿರ್ವಹಿಸಬೇಕು, ನಗರ ಸಭೆಯಿಂದ ರಸ್ತೆಗಳ ದುರಸ್ತಿ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ದೀಪಾಲಂಕಾರ, ಆಹ್ವಾನ ಪತ್ರಿಕೆಗಳ ಮುದ್ರಣ, ವಿಐಪಿ ಹಾಗೂ ವಿವಿಐಪಿ ಪಾಸ್ ವಿತರಣೆ, ಭಕ್ತಾಧಿಗಳು ವಿಶೇಷ ದರ್ಶನ ಪಡೆಯಲು ಟಿಕೆಟ್ ವ್ಯವಸ್ಥೆ, ಲಾಡು ಪ್ರಸಾದ, ದೊನ್ನೆ ಪ್ರಸಾದ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಕರ್ತವ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.
ಕಳೆದ ವರ್ಷ ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರವರೆಗೆ ದೇಗುಲ ಬಾಗಿಲು ತೆರೆದಿದ್ದು, ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಎಂಟನೇ ದಿನ ಜಿಲ್ಲಾಡಳಿತ ದೇವಿಯ ದರ್ಶನದ ಅವಧಿ ವಿಸ್ತರಣೆ ಮಾಡಲಾಗಿತ್ತು, ಪ್ರತಿ ದಿನ 30 ರಿಂದ 50 ಸಾವಿರ ಭಕ್ತರಂತೆ ಸುಮಾರು ಆರು ಲಕ್ಷಕ್ಕೂ ಅಧಿಕ ಭಕ್ತರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದಿದ್ದರು.












Click it and Unblock the Notifications