ಹಾಸನಾಂಬೆಯ ದರ್ಶನಕ್ಕೆ ಇಂದು ಕೊನೆಯ ದಿನ: ನಾಳೆ ಬಾಗಿಲು ಬಂದ್, ಈವರೆಗೂ ಬಂದ ಆದಾಯವೆಷ್ಟು..?
ಹಾಸನ, ನವೆಂಬರ್ 14: ವರ್ಷಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವಿ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ನವೆಂಬರ್ 2ರಂದು ಬಾಗಿಲು ತೆರೆದ ಹಾಸನಾಂಬಾ ದೇವಾಲಯ ನಾಳೆ ನವೆಂಬರ್ 15ರಂದು ಗರ್ಭಗುಡಿ ಬಾಗಿಲು ಮುಚ್ಚಲಿದೆ. ನವೆಂಬರ್ 3ರಂದು ಆರಂಭವಾದ ಸಾರ್ವಜನಿಕ ದರ್ಶನ ನವೆಂಬರ್ ಇಂದು ನವೆಂಬರ್ 14ರಂದು ಕೊನೆಯ ದಿನವಾಗಿದೆ.
ದರ್ಶನ ಆರಂಭವಾದ ದಿನದಿಂದ ಇಲ್ಲಿಯವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಭಕ್ತರು ಹಾಗೂ ಗಣ್ಯರು ವಿವಿಧೆಡೆಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಈ ಬಾರಿ ನಾಡಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ, ಸಚಿವರು, ಮಾಜಿ ಸಚಿವರು, ಶಾಸಕರು ಹಾಗೂ ಮಾಜಿ ಶಾಸಕರು ದೇವಿಯ ದರ್ಶನ ಪಡೆದಿದ್ದಾರೆ ಸಾರ್ವಜನಿಕ ದರ್ಶನದ 11ನೇ ದಿನವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಇಂದು ಅಹೋರಾತ್ರಿ ದರ್ಶನ
ಮಂಗಳವಾರ ಮುಂಜಾನೆ 4 ಗಂಟೆಯಿಂದಲೇ ದರ್ಶನ ಆರಂಭವಾಗಿದ್ದು, ಸಂಜೆ 7 ಗಂಟೆವರೆಗೆ, ರಾತ್ರಿ 11 ಗಂಟೆಯಿಂದ ಬುಧವಾರ ಬೆಳಗ್ಗೆ ವರೆಗೆ ದೇವಿಯ ದರ್ಶನ ಇರಲಿದೆ. ದೇವಿಗೆ ಧಾರಣೆ ಮಾಡಿರುವ ಆಭರಣ ತೆಗೆದ ಬಳಿಕ ವಿಶ್ವರೂಪ ದರ್ಶನ ಮುಗಿಸಿ ನವೆಂಬರ್ 15ರಂದು ಮಧ್ಯಾಹ್ನ ದೇವಿಯ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗುತ್ತದೆ.
ಸೋಮವಾರ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ಬಾಬು, ಮಾಗಡಿ ಶಾಸಕ ಬಾಲಕೃಷ್ಣ, ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮೊದಲಾದವರು ದೇವಿಯ ದರ್ಶನ ಪಡೆದರು. ಮಂಗಳವಾರ ದೀಪಾವಳಿ-ಬಲಿಪಾಡ್ಯಮಿ ದಿನವಾದ್ದರಿಂದ ಭಕ್ತರು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಜಿಲ್ಲಾಡಳಿತ ಸೂಕ್ತ ಬಿಗಿ ಭದ್ರತೆ ಮಾಡಿಕೊಂಡಿದೆ.

ಹಾಸನಾಂಬೆ ದರ್ಶನದಲ್ಲಿ ಹೊಸ ಇತಿಹಾಸ
ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಹೊಸ ಇತಿಹಾಸ ನಿರ್ಮಾಣ ಆಗಿದೆ. ಇದೇ ಮೊದಲ ಬಾರಿಗೆ ಹತ್ತು ಲಕ್ಷಕ್ಕೂ ಹೆಚ್ಚಿನ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಆದಾಯ ಬಂದಿದೆ. ಈವರೆಗೆ ಟಿಕೆಟ್ ಹಾಗೂ ಲಡ್ಡು ಮಾರಾಟದಿಂದ ಐದೂವರೆ ಕೋಟಿ ಆದಾಯ ಬಂದಿದೆ. 1 ಸಾವಿರ ಟಿಕೆಟ್ ಮಾರಾಟದಿಂದ 2,80,52,000 ರೂ. 300 ರೂ, ಟಿಕೆಟ್ ಮಾರಾಟದಲ್ಲಿ 2,15,56,500 ರೂ., ಲಾಡು ಮಾರಾಟದಲ್ಲಿ 56,11,520 ರೂ ಸಂಗ್ರಹವಾಗಿದೆ.
ಐಜಿಪಿ ಭೇಟಿ
ಭಾನುವಾರ ಹಾಸನಾಂಬೆ ದರ್ಶನದಲ್ಲಿ ನೂಕು ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ದೇಗುಲಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಭೇಟಿ ನೀಡಿ, ಸರತಿ ಸಾಲಿನ ವ್ಯವಸ್ಥೆ ಪರಿಶೀಲನೆ ನಡೆಸಿದರು. ಎಷ್ಟು ಹೊತ್ತು ಸರತಿ ಸಾಲಿನಲ್ಲಿ ನಿಂತಿದ್ದೀರಿ ಎಂದು ಭಕ್ತರಿಂದ ಮಾಹಿತಿ ಪಡೆದರು. ಇದಕ್ಕೂ ಮುನ್ನ ಶಾಸಕ ಸ್ವರೂಪ್ ಸಹ ವ್ಯವಸ್ಥೆ ಪರಿಶೀಲನೆ ನಡೆಸಿದರು.
ಹಾಸನಾಂಬೆಯ ಭಕ್ತರೊಂದಿಗೆ ಶಾಸಕ ಸ್ವರೂಪ್ ಪ್ರಕಾಶ್
ಚನ್ನಕೇಶವ ಕಲ್ಯಾಣಿ ಮಂಟಪದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳೊಂದಿಗೆ ಶಾಸಕ ಸ್ವರೂಪ್ ಪ್ರಕಾಶ್ ಉಪಹಾರ ಸೇವಿಸಿದರು. ಈ ವೇಳೆ ಉಪ ವಿಭಾಗಾಧಿಕಾರಿ ಮಾರುತಿ , ಡಿವೈಎಸ್‌ಪಿ ಮುರುಳೀಧರ್ , ಇನ್ಸ್‌ಪೆಕ್ಟರ್ ಮೋಹನ್ ಕೃಷ್ಣ, ಡಿಡಿಎಲ್‌ಆರ್ ಸುಜಲ್, ಎಡಿಎಲ್‌ಆರ್ ಶಂಸುದ್ದೀನ್ ಭಾಗಿಯಾಗಿದ್ದರು.
ಬಳಿಕ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಶಾಸಕರು ದ್ರಾಕ್ಷಿ, ಗೋಡಂಬಿ, ಚಾಕೊಲೇಟ್ ವಿತರಿಸಿದರು. ಇದಕ್ಕೂ ಮುನ್ನ ನಾನಾ ಕಡೆಗಳಿಂದ ಆಗಮಿಸಿದ ಭಕ್ತಾದಿಗಳ ಕುಶಲೋಪರಿ ವಿಚಾರಿಸಿದರು. ಬೆಳಗ್ಗೆ 8 ಗಂಟೆಯಿಂದ ದಿನವಿಡೀ ದೇವಾಲಯದ ಆವರಣದಲ್ಲಿಯೇ ಇದ್ದು, ಅಧಿಕಾರಿಗಳು-ಸಿಬ್ಬಂದಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.












Click it and Unblock the Notifications