Breaking: ಹಾಸನದಲ್ಲಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಗಾಂಜಾ ಘಾಟು, ತಹಶೀಲ್ದಾರ್ ಭೇಟಿ
ಹಾಸನ, ಸೆಪ್ಟೆಂಬರ್ 01: ಹಾಸನದ ಬೇಲೂರಿನಲ್ಲಿರುವ ಸರ್ಕಾರಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಗಾಂಜಾ ಘಾಟು ಕಂಡುಬಂದಿದೆ. ಅಪ್ರಾಪ್ತ ವಿದ್ಯಾರ್ಥಿಗಳು ಮಾದಕವಸ್ತು ಸೇವನೆ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಈ ಆರೋಪದ ಹಿನ್ನಲೆಯಲ್ಲಿ ತಹಶೀಲ್ದಾರ್ ಮಮತಾ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸ್ಟೆಲ್ ಸಿಬ್ಬಂದಿಗಳೇ ರೆಕಾರ್ಡ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಹಶೀಲ್ದಾರ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಸರ್ಕಾರಿ ವಸತಿ ಶಾಲೆಯ ಬಾಲಕರ ಹಾಸ್ಟೆಲ್‌ನಲ್ಲಿ ನಡೆದಿದೆ. ಅಪ್ರಾಪ್ತ ವಿದ್ಯಾರ್ಥಿಗಳು ಬಿಂದಾಸ್ ಆಗಿ ಗಾಂಜಾ, ವೈಟ್ನರ್, ಮದ್ಯ, ಸಿಗರೇಟ್ ಸೇವನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಾಸ್ಟೆಲ್ ಕಟ್ಟಡದ ಮೇಲೆ ಮದ್ಯದ ಬಾಟಲ್, ಸಿಗರೇಟು ತುಂಡುಗಳು ಪತ್ತೆಯಾಗಿವೆ.

ಮಾಹಿತಿಗಳ ಪ್ರಕಾರ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸುತ್ತಿರುವ ವಿಡಿಯೋವನ್ನು ಹಾಸ್ಟೆಲ್ ಸಿಬ್ಬಂದಿಯೇ ಚಿತ್ರೀಕರಿಸಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗಳು ಬಾಲ್ಯಾವಸ್ಥೆಯಲ್ಲಿ ದಾರಿ ತಪ್ಪುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ. ಹಾಸ್ಟೆಲ್‌ಗೆ ಮಾದಕ ವಸ್ತುಗಳನ್ನು ವಿದ್ಯಾರ್ಥಿಗಳು ತರುತ್ತಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗಾಂಜಾ, ಸಿಗರೇಟ್, ಮದ್ಯವನ್ನು ಸರಬರಾಜು ಮಾಡುತ್ತಿರುವುದು ಈ ಹಿಂದೆಯೂ ಬೆಳಕಿಗೆ ಬಂದಿತ್ತು. ಆಗ ಕೆಲವರು ಸಿಕ್ಕಿಬಿದ್ದಿದ್ದರು. ಈ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಕ್ಕೆ ವಾರ್ಡನ್ ಮೇಲೆ ಹಲ್ಲೆಗೆ ಓರ್ವ ವಿದ್ಯಾರ್ಥಿ ಮುಂದಾಗಿದ್ದ ಎಂಬ ಮಾಹಿತಿಯೂ ಇದೆ.
ವಾರ್ಡನ್ ಬುದ್ಧಿವಾದ ಹೇಳಿದರೂ ಕೇಳದ ವಿದ್ಯಾರ್ಥಿಗಳು ವಾರ್ಡನ್ ಹಾಗೂ ಶಿಕ್ಷಕರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರು. ಈಗ ಮತ್ತೆ ಹಾಸ್ಟೆಲ್ ವಿದ್ಯಾರ್ಥಿಗಳ ವಿಡಿಯೋ ವೈರಲ್ ಆಗಿದ್ದು, ಭಾನುವಾರ ತಹಶೀಲ್ದಾರ್ ಮಮತಾ ಹಾಸ್ಟೆಲ್‌ಗೆ ಭೇಟಿ ನೀಡಿದರು.
ಬೇಲೂರು ತಹಶೀಲ್ದಾರ್ ಮಮತಾ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡದ ಹಾಸ್ಟೆಲ್ ಸಿಬ್ಬಂದಿಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವರ್ಷದ ಹಿಂದೆ ಹಾಸ್ಟೆಲ್ ಸಿಬ್ಬಂದಿಯಿಂದಲೇ ರೆಕಾರ್ಡ್ ಮಾಡಲಾಗಿದ್ದ ವಿಡಿಯೋ ಈಗ ವೈರಲ್ ಆಗಿದೆ ಎಂಬ ಮಾಹಿತಿಯೂ ಇದೆ.
ಹಾಸ್ಟೆಲ್ ಸಿಬ್ಬಂದಿಗಳ ನಡುವಿನ ಗಲಾಟೆ ಕಾರಣದಿಂದ ವಿಡಿಯೋ ವೈರಲ್ ಆಗಿದ್ದು, ಹಾಸ್ಟೆಲ್ ಪರಿಸರ, ವಿದ್ಯಾರ್ಥಿಗಳ ಬಗ್ಗೆ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ನಡೆದ ಘಟನೆ ಬಗ್ಗೆ ತಹಶೀಲ್ದಾರ್ ಮಮತಾ ಮಾಹಿತಿ ಸಂಗ್ರಹ ಮಾಡಿದ್ದಾರೆ.
ತಹಶೀಲ್ದಾರ್ ಈ ಕುರಿತು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ. ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ಇರುವುದು ಖಚಿತವಾಗಿದ್ದು, ಸಿಬ್ಬಂದಿಗಳ ಬಳಿ ಮಾಹಿತಿಯನ್ನು ಪಡೆಯಲಾಗಿದೆ. ಹಾಸ್ಟೆಲ್‌ಗೆ ಮದ್ಯ, ಗಾಂಜಾ ಪೂರೈಕೆಯಾಗುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ನಿರೀಕ್ಷೆ ಇದೆ. ವಿಡಿಯೋ ವೈರಲ್ ಮಾಡಿದವರು ಯಾರು? ಎಂದು ಪರಿಶೀಲನೆ ನಡೆಸಲಾಗುತ್ತಿದೆ.
ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಗಾಂಜಾ ಸಾಗಾಟ, ಗಾಂಜಾ ಮಾರಾಟ ಮತ್ತು ಗಾಂಜಾ ಬೆಳೆದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ಪೊಲೀಸ್ ಇಲಾಖೆ ತನಿಖೆಯನ್ನು ಸಹ ಕೈಗೊಂಡಿದೆ.












Click it and Unblock the Notifications