Hassan: ಜಮೀನಿಗೆ ಬಿದ್ದ ಬೆಂಕಿ ಆರಿಸಲು ಹೋದ ರೈತ ಮಹಿಳೆ ಸುಟ್ಟು ಭಸ್ಮ
ಹಾಸನ, ಮಾರ್ಚ್ 25: ಬೆಂಕಿ ಆರಿಸಲು ಹೋದ ರೈತ ಮಹಿಳೆ ಬೆಂಕಿಗಾಹುತಿಯಾದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಾಚಗೋಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ (63) ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ ರೈತ ಮಹಿಳೆ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ತಮ್ಮ ಜಮೀನಿಗೆ ಬೆಂಕಿ ಬಿದ್ದಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ರತ್ನಮ್ಮ ಸ್ಥಳಕ್ಕೆ ಓಡಿದ್ದಾರೆ. ಈ ವೇಳೆ ತನ್ನ ಜಮೀನಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಕೂಡಲೇ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಈ ವೇಳೆ ರತ್ನಮ್ಮ ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ಸಿಲುಕಿದ್ದಾರೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿದಿದ್ದು, ಬೆಂಕಿಗೆ ಸಿಲುಕಿ ಹೊರಬರಲಾರದೆ ರೈತ ಮಹಿಳೆ ರತ್ನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸದ್ಯ ರತ್ನಮ್ಮ ಮೃತದೇಹವನ್ನು ಆಲೂರು ಆಸ್ಪತ್ರೆಗೆ ರವಾನಿಸಲಾಗಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸಲು ಹೋಗಿ ರೈತರು ಸಿಲುಕಿರುವ ಘಟನೆಒಂದು ವಾರದ ಅಂತರದಲ್ಲಿ ಎರಡು ನಡೆದಿದ್ದು, ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ.
ಬೀರೂರಲ್ಲಿ ಬಾಧಿಸುತ್ತಿದೆ ಮಂಗನ ಬಾವು ಸೋಂಕು
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ವ್ಯಾಪ್ತಿಯಲ್ಲಿ ಮಂಗನ ಬಾವು(ಗದ್ದಬಾವು) ಹೆಚ್ಚಾಗಿ ಹರಡುತ್ತಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಿಂದಾಗಿ ಎಲ್ಲೆಡೆ ಆತಂಕ ಸೃಷ್ಠಿಯಾಗಿದೆ.
ಮಂಗನ ಬಾವು ಕಾಯಿಲೆಗೆ ಇಂಗ್ಲೀಷಿನಲ್ಲಿ ಮಮ್ಸ್ ಎಂದು ಸ್ಥಳೀಯವಾಗಿ ಗದ್ದಮ್ಮ ಎನ್ನುತ್ತಾರೆ. ಈ ಸೋಂಕು ಡಿಸೆಂಬರ್ ನಲ್ಲಿ ಹೆಚ್ಚಾಗಿ ಪ್ರತಿದಿನ 30-50 ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಜನವರಿ ನಂತರದಲ್ಲಿ ಇಳಿಮುಖಗೊಂಡಿತ್ತು. ಆದರೆ ಇದೀಗ ನಿತ್ಯ 2-3 ಪ್ರಕರಣಗಳು ದಾಖಲಾಗುತ್ತಿವೆ.
ಈ ವೈರಸ್ ಗಂಟಲಿನಲ್ಲಿರುವ ಪ್ಯಾರೋಟಿಕ್ ಗ್ರಂಥಿಗಳಿಗೆ ಆಕ್ರಮಿಸಿಕೊಳ್ಳುವ ಕಾರಣ ಗಂಟಲಲ್ಲಿ ನೋವು, ಬಳಲಿಕೆ, ಜ್ವರ, ವಾಂತಿ ಹಾಗೂ ತಲೆನೋವು ಆಂಭವಾಘುತ್ತದೆ. 4-5 ದಿನಗಳವರೆಗೂ ಬಾಧಿಸುವುದಲ್ಲದೆ. ವಾರದವರೆಗೂ ದೇಹದ ಶಕ್ತಿಯನ್ನೇ ಕುಂದಿಸಿ ಜನರು ಬಳಲಿ ಬೆಂಡಾಗುವಂತೆ ಮಾಡುತ್ತದೆ.
ಪಿ.ಕೆ.ಎಸ್.ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಅರುಣ್ ಈ ಬಗ್ಗೆ ಪ್ರತಿಕ್ರಯಿಸಿ, ಮಂಗನ ಬಾವು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಲಸಿಕೆಯು ಇಲ್ಲ. ಬದಲಾಗಿ 9ರಿಂದ 15 ತಿಂಗಳೊಳಗಿನ ಮಕ್ಕಳಿಗೆ ನೀಡುವ ರೋಗ ನಿರೋಧಕ ಲಸಿಕೆಯನ್ನು ತಪ್ಪದೆ ಹಾಕಿಸಬೇಕು. ಇದರಿಂದಾಗಿ ಮಂಗನ ಬಾವು ಹರಡುವ ಸಾಧ್ಯತೆ ಇರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕೆಂಚೇಗೌಡ ಮಾಹಿತಿ ನೀಡಿ, ಮಮ್ಸ್ ರೋಗಕ್ಕೆ ಯಾವುದೇ ನಿರ್ಧಿಷ್ಟವಾದ ಲಸಿಕೆಗಳಿಲ್ಲ, ವಾರದವರೆಗೂ ಇದ್ದು ದೇಹದ ಶಕ್ತಿಯನ್ನು ಕುಗ್ಗಿಸಿ ಅದೇ ಹೊರಟು ಹೋಗುತ್ತದೆ. ಜ್ವರ ಸುಸ್ತುಗಳಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬಹುದು ಎಂದರು.












Click it and Unblock the Notifications