ನಾನೇ ಮಾಡಿದ್ದು ಎಂಬ ಗರ್ವ ಇರಬಾರದು: ಮೋದಿ ವಿರುದ್ಧ ದೇವೇಗೌಡರ ಕಿಡಿ
ಹಾಸನ, ಫೆಬ್ರವರಿ 9: 'ಐದು ವರ್ಷದಲ್ಲಿ ಯಾರೂ ಮಾಡದ ಸಾಧನೆಯನ್ನು ನಾನು ಮಾಡಿದ್ದೇನೆ. ಬೇರೆ ಯಾರೂ ಈ ಸಾಧನೆ ಮಾಡಿಲ್ಲ' ಎನ್ನುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾರೆ. ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂಬ ಗರ್ವ ಇರಬಾರದು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕಿಡಿಕಾರಿದರು.
ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಪ್ರಧಾನಿಯಾದವರು ಅವರ ಚೌಕಟ್ಟಿನೊಳಗೆ ಮಾತನಾಡಬೇಕು. ಆ ಚೌಕಟ್ಟನ್ನು ಮೀರಿ ಎಂದಿಗೂ ಮಾತನಾಡಬಾರದು. ಎಂತೆಂಥವರೋ ಅಧಿಕಾರಕ್ಕೆ ಬಂದು ಹೋಗಿದ್ದಾರೆ. ಯಾರೂ ಮಾಡದ್ದನ್ನು ನಾನು ಮಾಡಿದ್ದೇನೆ ಎಂಬ ಗರ್ವಭಂಗವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ರಿಟಿಷರ ಕಾಲದಿಂದಲೂ ಅನೇಕರು ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಬ್ರಿಟಿಷರಿಂದ ನಾವು ಭಾರತವನ್ನು ಉಳಿಸಿಕೊಳ್ಳಲಿಲ್ಲವೇ? ಹಿಂದಿನ ಕಾಲದ ಪ್ರಧಾನಿಗಳ ಭಾಷಣವನ್ನೂ ಕೇಳಬೇಕು. ಆಗಿನ ಕಾಲದಲ್ಲಿ ಪ್ರಪಂಚವೆಲ್ಲ ಮಲಗಿದೆ, ಭಾರತ ಮಾತ್ರ ಎದ್ದಿದೆ ಎಂಬ ಮಾತಿತ್ತು ಎಂದು ನೆನಪಿಸಿಕೊಂಡರು.

ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಲ್ಲರೂ ಆರೋಪಿಸುತ್ತಾರೆ. ಆದರೆ, ನಮ್ಮ ಕುಟುಂದವರಾರೂ ರಾಜಕಾರಣಕ್ಕೆ ಬರಬೇಕು ಎಂದು ಯೋಚಿಸಿರಲಿಲ್ಲ. ರೇವಣ್ಣ ಕೂಡ ರಾಜಕೀಯಕ್ಕೆ ಬರಬೇಕು ಎಂಬ ಯೋಚನೆ ಇರಲಿಲ್ಲ. ರೇವಣ್ಣನಿಗೆ ಬೆಂಗಳೂರಿನಲ್ಲಿ ಒಂದು ಕಾರ್ಖಾನೆ ಸ್ಥಾಪಿಸಬೇಕು ಎಂದುಕೊಂಡಿದ್ದೆ. ರೇವಣ್ಣ ಓದಿರುವುದು ಎಸ್‌ಎಸ್‌ಎಲ್‌ಸಿ ಮಾತ್ರ. ಹೆಚ್ಚು ವಿದ್ಯಾವಂತರಲ್ಲ. ಆದರೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರೇವಣ್ಣ ಅವರೇ ಕಾರಣ ಎಂದು ಪ್ರಶಂಸಿಸಿದರು.












Click it and Unblock the Notifications