ಎಚ್.ಡಿ. ದೇವೇಗೌಡರದು ದೇಶದಲ್ಲೇ 2ನೇ ಅತಿ ದೊಡ್ಡ ರಾಜಕೀಯ ಕುಟುಂಬ!
ಹಾಸನ, ಡಿಸೆಂಬರ್ 14: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಗೆದ್ದು ಬೀಗಿದ್ದಾರೆ.
ಈ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಮೂರು ತಲೆಮಾರುಗಳ ಎಂಟನೇ ಸದಸ್ಯರಾಗಿ ಸೂರಜ್ ರೇವಣ್ಣ ಕರ್ನಾಟಕದ ಚುನಾವಣಾ ರಾಜಕೀಯ ಪ್ರವೇಶ ಮಾಡಿದ್ದಾರೆ.
ದೇಶದ ಸಕ್ರಿಯ ರಾಜಕೀಯದಲ್ಲಿ ಇದುವರೆಗೆ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿರುವ ರಾಜಕೀಯ ಕುಟುಂಬಗಳಲ್ಲಿ ನೆಹರು- ಗಾಂಧಿ ಕುಟುಂಬವನ್ನು ಹೊರತುಪಡಿಸಿ ಎಚ್.ಡಿ. ದೇವೇಗೌಡರ ಕುಟುಂಬ ಎರಡನೆಯ ಅತಿ ದೊಡ್ಡ ರಾಜಕೀಯ ಕುಟುಂಬವಾಗಿ ಹೊರಹೊಮ್ಮಿದೆ.

ಕುಟುಂಬ ರಾಜಕೀಯದ ಆರೋಪ
ಎಚ್.ಡಿ. ದೇವೇಗೌಡ ಕುಟುಂಬದ ತವರು ಕ್ಷೇತ್ರ ಹಾಸನದಿಂದ ಅಭ್ಯರ್ಥಿಯಾಗಿರುವುದು ಜನತಾ ದಳ ಸೆಕ್ಯುಲರ್ (ಜೆಡಿಎಸ್) ವಿರುದ್ಧ ಕುಟುಂಬ ರಾಜಕೀಯದ ಆರೋಪ ಕೇಳಿಬಂದಿತ್ತು. ಟೀಕೆಗಳ ನಡುವೆಯೂ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಗೂ ಮುನ್ನ ಹಾಸನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಕೇಳುವಾಗ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕುಟುಂಬ ರಾಜಕೀಯ ಆರೋಪಗಳನ್ನು ನಿರಾಕರಿಸಲು ಪ್ರಯತ್ನಿಸಿದ್ದರು.
ನವೆಂಬರ್ 12 ರಂದು ಜೆಡಿಎಸ್ (ಎಸ್) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಎಚ್.ಡಿ. ದೇವೇಗೌಡ, "ಇದು ತಂದೆ-ಮಕ್ಕಳ ಪಕ್ಷವಲ್ಲ. ಅಭ್ಯರ್ಥಿಯ ಹೆಸರನ್ನು ಘೋಷಿಸುವ ಮೊದಲು ಶಾಸಕರು, ಆಕಾಂಕ್ಷಿಗಳು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು," ಎಂದು ತಿಳಿಸಿದ್ದರು. ಅನಂತರ ಸೂರಜ್ ರೇವಣ್ಣರನ್ನು ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರು.

ದೇವೇಗೌಡರದು ಮೂರು ತಲೆಮಾರುಗಳ ರಾಜಕೀಯ ಕುಟುಂಬ
ಸೂರಜ್ ರೇವಣ್ಣ ರಾಜಕೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಎಚ್.ಡಿ. ದೇವೇಗೌಡ ಕುಟುಂಬದ ಎಂಟನೇ ಸದಸ್ಯರು. ಅವರ ತಾತ, ಮಾಜಿ ಪ್ರಧಾನಿ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದರು. ಸೂರಜ್ ರೇವಣ್ಣರ ಕಿರಿಯ ಸಹೋದರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭೆ ಸಂಸದರಾಗಿದ್ದಾರೆ.
ಸೂರಜ್ ರೇವಣ್ಣ ಚಿಕ್ಕಪ್ಪ ಎಚ್.ಡಿ. ಕುಮಾರಸ್ವಾಮಿ ಮತ್ತು ಚಿಕ್ಕಮ್ಮ ಅನಿತಾ ಕುಮಾರಸ್ವಾಮಿ ಪ್ರಸ್ತುತ ಕರ್ನಾಟಕ ವಿಧಾನಸಭೆಯ ಸದಸ್ಯರು. ಎಚ್.ಡಿ. ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಎರಡೂ ಸಂದರ್ಭಗಳಲ್ಲಿ ಅವರು ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದರು.

ಸೂರಜ್ ತಂದೆ ಎಚ್.ಡಿ. ರೇವಣ್ಣ ಶಾಸಕ
ಸೂರಜ್ ತಂದೆ ಎಚ್.ಡಿ. ರೇವಣ್ಣನವರು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಅವರ ತಾಯಿ ಭವಾನಿ ರೇವಣ್ಣ ಹಾಸನದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು. ಸೂರಜ್ ರೇವಣ್ಣ ಸ್ವತಃ ಹಾಸನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿದ್ದಾರೆ. ವಿಶೇಷವೆಂದರೆ ಸೂರಜ್ ಮತ್ತು ಅವರ ತಾಯಿ ಭವಾನಿ ರೇವಣ್ಣ ಇಬ್ಬರೂ ಹಾಸನ ಕ್ಷೇತ್ರದ ಎಂಎಲ್‌ಸಿ ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದರು.
ಸೂರಜ್ ರೇವಣ್ಣ ಕಿರಿಯ ಸಹೋದರ ಪ್ರಜ್ವಲ್ ರೇವಣ್ಣ 2019ರಲ್ಲಿ ಹಾಸನದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾದರು. ಅವರ ಸೋದರ ಸಂಬಂಧಿ ನಿಖಿಲ್ ಕುಮಾರಸ್ವಾಮಿ 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ನಿಖಿಲ್ ಮತ್ತು ಪ್ರಜ್ವಲ್ ಇಬ್ಬರೂ ಅನೇಕ ವರ್ಷಗಳ ಕಾಲ ಜೆಡಿ(ಎಸ್)ನ ಅಧಿಕೃತ ಸದಸ್ಯರಾಗಿದ್ದರೂ, 2019ರಲ್ಲಿ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ನಿಖಿಲ್ ಕುಮಾರಸ್ವಾಮಿ ಪ್ರಸ್ತುತ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿದ್ದಾರೆ.

1,433 ಮತಗಳ ಅಂತರದಿಂದ ಗೆದ್ದ ಸೂರಜ್ ರೇವಣ್ಣ
ಕರ್ನಾಟಕದ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣನವರು ಹಾಸನ ಕ್ಷೇತ್ರದಿಂದ ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿ 1,433 ಮತಗಳ ಅಂತರದಿಂದ ಗೆದ್ದಿದ್ದಾರೆ.
ಉಭಯ ಸದನಗಳ ಮೇಲ್ಮನೆಯ 25 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಡಿಸೆಂಬರ್ 10ರಂದು ನಡೆದಿತ್ತು. 20 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಗಳ ಚುನಾಯಿತ ಸದಸ್ಯರು ಚುನಾವಣೆಯಲ್ಲಿ ಮತದಾರರಾಗಿದ್ದರು.












Click it and Unblock the Notifications