ಹಾಸನದಲ್ಲಿ ಕಾಡಿನಿಂದ ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ
ಹಾಸನ, ಏಪ್ರಿಲ್ 29: ಕಾಡಿನಿಂದ ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದ ಘಟನೆ ಬೇಲೂರು ತಾಲೂಕಿನ ಹಳೇಬೀಡು ಗ್ರಾಮದ ಗೌರಿಕೊಪ್ಪಲಿನಲ್ಲಿ ನಡೆದಿದ್ದು, ಚಿರತೆಯನ್ನು ಸುರಕ್ಷಿತವಾಗಿ ಮೇಲೆತ್ತಿ ಕಾಡಿಗೆ ಬಿಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬಾವಿಗೆ ಬಿದ್ದಿದ್ದ ಚಿರತೆ ಸುಮಾರು ಆರೇಳು ವರ್ಷ ಪ್ರಾಯದ್ದಾಗಿದ್ದು, ಇದು ಮಂಗಳವಾರ ರಾತ್ರಿ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಆಹಾರ ಅರಸಿಕೊಂಡು ಹಳೆಬೀಡು ಗ್ರಾಮದ ಗೌರಿಕೊಪ್ಪಲಿನ ಕಡೆಗೆ ಬಂದಿದೆ. ಹೀಗೆ ಬಂದ ಚಿರತೆ ರಾತ್ರಿ ವೇಳೆಯಲ್ಲಿ ಜಮೀನಿನಲ್ಲಿದ್ದ ಪಾಳು ಬಾವಿಗೆ ಬಿದ್ದಿದ್ದು, ಮೇಲೆ ಹತ್ತಿ ಬರಲಾಗದೆ ಚೀರಾಡಿದೆ. ಇದ್ದಕ್ಕಿದ್ದಂತೆ ಪಾಳು ಬಾವಿಯಿಂದ ಚಿರತೆ ಚೀರಾಡುವ ಶಬ್ದ ಕೇಳಿ ಬಂದಿದ್ದರಿಂದ ಅಲ್ಲಿಗೆ ತೆರಳಿ ನೋಡಿದವರಿಗೆ ಬಾವಿಯಲ್ಲಿ ಚಿರತೆ ಬಿದ್ದಿರುವುದು ಕಾಣಿಸಿದೆ.

ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ನಂತರ ಬಾವಿಯಿಂದ ಮೇಲೆತ್ತಿ ಬೋನಿನಲ್ಲಿ ಕೂಡಿ ಹಾಕಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಡಿಸಿಎಫ್ ಶಿವರಾಮ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications