ಕರ್ತವ್ಯ ಲೋಪ: ಬಳದರೆ ಗ್ರಾಮ ಪಂಚಾಯತ್‌ನ ಮೂವರು ಪಿಡಿಒಗಳ ಅಮಾನತು
ಹಾಸನ, ಜುಲೈ, 13: ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಚನ್ನರಾಯಪಟ್ಟಣ ತಾಲೂಕಿನ ಬಳದರೆ ಗ್ರಾಮ ಪಂಚಾಯತ್‌ನ ಮೂವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ.
ಬಳದರೆ ಗ್ರಾಮ ಪಂಚಾಯತ್‌ನಲ್ಲಿ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಡಿ.ಕಾಳೇನಹಳ್ಳಿ ಪಿಡಿಒ ಸಿ.ಎನ್.ನವೀನ್, ಕೆಂಬಾಳು/ಬಾಗೂರು ಪಿಡಿಒ ಕೃಷ್ಣೇಗೌಡ, ಡಿ.ಬಳದರೆ ಹಾಗೂ ದಿಂಡಗೂರು ಪಿಡಿಒ ರಾಮಸ್ವಾಮಿ ಎನ್ನುವ ಮೂವರು ಪಿಡಿಒಗಳನ್ನು ಅಮಾನತು ಮಾಡಿ ಹಾಸನ ಜಿಲ್ಲಾ ಪಂಚಾಯತ್ ಸಿಇಓ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.

ಅಮಾನತು ಆದ ಮೂವರು ಪಿಡಿಒಗಳು ಕೂಡ ಬಳದರೆ ಗ್ರಾಮ ಪಂಚಾಯತ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸಾರ್ವಜನಿಕರಿಗೆ ಮೀಸಲಿಟ್ಟ 18ಎ ನಿವೇಶನವನ್ನು ಖಾಸಗಿ ವ್ಯಕ್ತಿಗೆ ಮಾಡಿಕೊಟ್ಟಿದ್ದಾರೆಂಬ ಆರೋಪದ ಮೇರೆಗೆ ಈ ಮೂವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಾಂಶುಪಾಲರ ಅಮಾನತು
ಇತ್ತೀಚೆಗಷ್ಟೇ ಕುಡಿದ ಮತ್ತಿನಲ್ಲೇ ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು ಶಾಸಕರ ಬಳಿ ಮನವಿ ಪತ್ರ ನೀಡಲು ಬಂದು ಕರ್ತವ್ಯದಿಂದ ಅಮಾನತಾದ ಘಟನೆ ಎನ್.ಆರ್ ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ನಡೆದಿತ್ತು. ಸಿಂಸೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಲೊಕನಾಯ್ಕ ಅಮಾನತಾದ ಪ್ರಾಂಶುಪಾಲ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೊಕನಾಯ್ಕ ವಸತಿ ಶಾಲೆಯ ಸಮಸ್ಯೆ ಕುರಿತು ಮನವಿ ಪತ್ರ ನೀಡಲು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರನ್ನು ಭೇಟಿಯಾಗಲು ಬಂದಿದ್ದರು. ಕುಡಿದ ಮತ್ತಿನಲ್ಲಿದ್ದ ಲೊಕನಾಯ್ಕ ಅವರನ್ನು ನೋಡಿ ಮಾತನಾಡಿದ ಶಾಸಕ ಟಿ.ಡಿ ರಾಜೇಗೌಡ ಅನುಮಾನಗೊಂಡು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ವೈದ್ಯರನ್ನು ಕರೆಸಿ ಬ್ರೀಥಿಂಗ್ ಆಲ್ಕೋಹಾಲ್ ಅನಲೈಸರ್ ಮೂಲಕ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಮದ್ಯಪಾನ ಮಾಡಿರುವುದು ದೃಢವಾದ ಹಿನ್ನೆಲೆಯಲ್ಲಿ ಕೋಪಗೊಂಡ ಶಾಸಕರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಪ್ರಾಂಶುಪಾಲ ಲೊಕನಾಯ್ಕ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಕರ್ತವ್ಯದ ಸಮಯದಲ್ಲೇ ಮದ್ಯಪಾನ ಮಾಡಿ ಶಾಸರನ್ನು ಭೇಟಿಯಾದ ಪ್ರಾಂಶುಪಾಲ ಲೊಕನಾಯ್ಕ ಕರ್ತವ್ಯದಿಂದ ಅಮಾನತಾಗಿದ್ದರು.












Click it and Unblock the Notifications