ಮೊದಲ ಬಾರಿಗೆ ಹಾಸನಾಂಬ ದರ್ಶನ ಪಡೆಯಲಿರುವ ಸಿಎಂ ಸಿದ್ದರಾಮಯ್ಯ, ಯಾವಾಗ?
ಹಾಸನ, ನವೆಂಬರ್, 06: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬ ದೇಗುಲದ ಬಾಗಿಲು ನವೆಂಬರ್ 2ರಂದು ತೆರೆದಿದ್ದು, ಭಕ್ತರಿಗೆ ದರ್ಶನಕ್ಕೆ ನವೆಂಬರ್ 3ರಂದು ಅವಕಾಶ ಕಲ್ಪಿಸಲಾಗಿತ್ತು. ಅಂದಿನಿಂದ ಹಲವು ರಾಜಕಾರಣಿಗಳು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಹಾಗೆಯೇ 5ನೇ ದಿನವಾದ ನಾಳೆ (ನವೆಂಬರ್ 07) ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ (ನವೆಂಬರ್ 07) ಬೆಳಗ್ಗೆ 12-30ಕ್ಕೆ ಹಾಸನಾಂಬೆ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಈ ವೇಳೆ ಸಿಎಂಗೆ ಸಚಿವರು ಮತ್ತು ಶಾಸಕರು ಸಾಥ್ ನೀಡಲಿದ್ದಾರೆ. ಇನ್ನು ಹಾಸನಾಂಬೆ ದರ್ಶನದ ಬಳಿಕ ಹಾಸನ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.

ಇನ್ನು ನಾಲ್ಕನೇ ದಿನವಾದ ಇಂದು ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಆಗಮಿಸಿದ್ದು, ಇದೇ ವೇಳೆ ಮುಸಲ್ಮಾನ್ ಕುಟುಂಬ ಹಾಸನಾಂಬೆ ದರ್ಶನ ಪಡೆದಿದ್ದು ವಿಶೇಷವಾಗಿತ್ತು. ಹಜೀರ ಎಂಬ ಮುಸ್ಲಿಂ ಮಹಿಳೆ ಕುಟುಂಬ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಗಮನ ಸೆಳೆದರು. ಈ ಮೂಲಕ ಈ ಮುಸ್ಲಿ ಕುಟುಂಬ ದೇವನೊಬ್ಬ ನಾಮಹಲವು ಎಂಬ ಸಂದೇಶ ಸಾರಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಹಜೀರ, ಹಾಸನಾಂಬೆ ಮೇಲೆ ನಮಗೆ ನಂಬಿಕೆ ಇದೆ. ತುಂಬ ವರ್ಷಗಳಿಂದ ದೇವರ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದು, ಈ ಬಾರಿ ದರ್ಶನಕ್ಕೆ ಬರುವ ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.












Click it and Unblock the Notifications