ಮಳೆಗಾಗಿ ಮಕ್ಕಳ ಮದುವೆ: ಹಾಸನದಲ್ಲಿ ನಡೆದ ವಿಚಿತ್ರ ಘಟನೆ
ಹಾಸನ ಸೆಪ್ಟೆಂಬರ್ 27: ಈ ಬಾರಿ ನಿರೀಕ್ಷೆಯಂತೆ ಮಳೆಯಾಗದ ಕಾರಣ ಗ್ರಾಮಸ್ಥರು ಪುಟ್ಟ ಮಕ್ಕಳಿಗೆ ಮದುವೆ ಮಾಡಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕರಿಕ್ಯಾತನಹಳ್ಳಿ ಗ್ರಾಮಸ್ಥರು ಇಬ್ಬರು ಮಕ್ಕಳಿಗೆ ಮದುವೆ ಮಾಡಿ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.
ಹೌದು... ಮಳೆಗಾಗಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವ ಸಂಪ್ರದಾಯ ಇಂದಿಗೂ ಅಲ್ಲಲ್ಲಿ ಇದೆ. ಆದರೆ ಈ ಗ್ರಾಮದ ಜನ ಮಳೆಗಾಗಿ ಇಬ್ಬರು ಪುಟ್ಟ ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ಮಕ್ಕಳಿಗೆ ಮದುವೆ ಗಂಡು ಹೆಣ್ಣಿನ ವೇಷ ತೊಡಿಸಿ ಮದುವೆ ಶಾಸ್ತ್ರ ನೆರವೇರಿಸಿದ್ದಾರೆ.

ಗ್ರಾಮದಲ್ಲಿ ರಾಗಿ ಬಿತ್ತನೆ ಮಾಡಿ ಎರಡು ತಿಂಗಳಾದರೂ ಮಳೆಯಾಗಿರಲಿಲ್ಲ. ಹೀಗಾಗಿ ಒಂಭತ್ತು ದಿನಗಳಿಂದ ಗ್ರಾಮದಲ್ಲಿ ನಿತ್ಯವೂ ವಿಶೇಷ ಪೂಜೆ ನಡೆಯುತ್ತಲೇ ಇದೆ. ಮಳೆಗಾಗಿ ನಿತ್ಯವೂ ಒಂದೊಂದು ಪೂಜೆ, ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎಂಟು ದಿನ ಅರ್ಧ ಚಂದ್ರ, ಕೊನೆಯ ದಿನ ಪೂರ್ಣಚಂದ್ರನನ್ನ ರಂಗೋಲಿಯಲ್ಲಿ ಬಿಡಿಸಿ ಪೂಜಿಸಿದರೆ ಮಳೆಯಾಗುತ್ತದೆ ಎನ್ನುವ ನಂಬಿಕೆ ಈ ಗ್ರಾಮಸ್ಥರಲ್ಲಿದೆ.
ಹೀಗಾಗಿ ಕೊನೆಯ ದಿನ ಅಂದರೆ ಒಂಭತ್ತನೆಯ ದಿನ ಗ್ರಾಮಸ್ಥರು ಮಕ್ಕಳಿಗೆ ಮದುವೆ ಮಾಡಿ ಪ್ರಾರ್ಥನೆ ಮಾಡಿದ್ದಾರೆ. ಗ್ರಾಮದ ಗಿರೀಶ್ ಎಂಬ ಪುಟ್ಟ ಬಾಲಕನಿಗೆ ವರನ ವೇಷ ತೊಡಿಸಿ ಹಾಗೂ ಅಂಜನ್ ಎಂಬ ಹುಡುಗಿಗೆ ವಧುನಂತೆ ಸಿಂಗರಿಸಿ ಮದುವೆ ಮಾಡಲಾಗಿದೆ. ಇಬ್ಬರನ್ನೂ ಕೂರಿಸಿ ಗಂಡು-ಹೆಣ್ಣಿನ ಶಾಸ್ತ್ರ ನೆರವೇರಿಸಲಾಗಿದೆ. ಗಂಡುಹೆಣ್ಣು ಮೆರವಣಿಗೆ ಬಳಿಕ ಅಂತಿಮ ಪೂಜೆ ಮಾಡಿ ವಿಶೇಷ ಪ್ರಾರ್ಥನೆಯನ್ನು ಪೂರ್ಣಗೊಳಿಸಿದ್ದಾರೆ ಗ್ರಾಮಸ್ಥರು.

ಹಾಸನ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ
ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿದು ಮಣ್ಣಿನಡಿ ಸಿಲುಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾದ ಘಟನೆ ಹಾಸನದ ಬೇಲೂರು ತಾಲ್ಲೂಕಿನ, ಹನಿಕೆ ಗ್ರಾಮದ ಬಳಿ ನಡೆದಿದೆ. ಮೃತತನನ್ನು ಹೊಳೆನರಸೀಪುರದ ದರ್ಶನ್‌ಕುಮಾರ್ (29) ಎಂದು ಗುರುತಿಸಲಾಗಿದೆ.
ದರ್ಶನ್‌ಕುಮಾರ್, ವಸಂತ್‌ಕುಮಾರ್ ಹಾಗೂ ಲೋಕಪ್ಪ ಹನಿಕೆ ಗ್ರಾಮದ ಕೆರೆ ಕೋಡಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕೆಲಸ ಮಾಡುತ್ತಿದ್ದವರ ಮೇಲೆ ದಿಢೀರ್ ಮಣ್ಣು ಕುಸಿದಿದೆ. ಈ ವೇಳೆ ದರ್ಶನ್‌ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲೋಕಪ್ಪ, ವಸಂತ್‌ಕುಮಾರ್ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳು ಲೋಕಪ್ಪ, ವಸಂತ್‌ಕುಮಾರ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನದ ಪ್ರಕಾಶ್ ಎಂಬಾತ ಕೆರೆ ಕೋಡಿ ದುರಸ್ತಿ ಗುತ್ತಿಗೆ ಪಡೆದಿದ್ದರು ಎಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಾಸನ ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ
ಹಾಸನ ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ದುರುಳನೊಬ್ಬ ಕಿವುಡ ಮತ್ತು ಮೂಕ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ. ಒಂದು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಶ್ರವಣದೋಷವುಳ್ಳ ವಸತಿಯುತ ಕಿವುಡ ಮಕ್ಕಳ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಆರೋಪಿ ಎಸ್ಕೇಪ್ ಆಗಿದ್ದಾನೆ.
ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಅಪ್ರಾಪ್ತ ಬಾಲಕಿ ತನ್ನ ಪೋಷಕರ ಬಳಿ ಹೇಳಿಕೊಳ್ಳಲಾಗದೆ, ವೈದ್ಯರ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಅಪ್ರಾಪ್ತ ಬಾಲಕಿ ತಂದೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications