ಬಿಸಿಲಲ್ಲಿ ಸುತ್ತಾಡ್ಲಿ, ಕಷ್ಟ ಗೊತ್ತಾಗುತ್ತೆ: 'ಜೋಡೆತ್ತು'ಗಳಿಗೆ ಎಚ್‌ಡಿಕೆ ವ್ಯಂಗ್ಯ
Recommended Video

ಚನ್ನರಾಯಪಟ್ಟಣ, ಏಪ್ರಿಲ್ 3: 'ಸ್ವಲ್ಪ ಬಿಸಿಲು ನೋಡಲಿ ಬಿಡಿ, ಕಷ್ಟ ಏನು ಎಂಬುದು ಗೊತ್ತಾಗುತ್ತದೆ'- ಇದು ಸುಮಲತಾ ಅವರ ಪರ ಪ್ರಚಾರಕ್ಕೆ ಬಂದಿರುವ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ ಪರಿ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ದಿನನಿತ್ಯ ಛತ್ರಿ ಹಿಡಿದು ಸಿನಿಮಾ ಚಿತ್ರೀಕರಣದಲ್ಲಿ ಇರುತ್ತಿದ್ದರು. ಬಿಸಿಲಿನಲ್ಲಿ ಸುತ್ತಾಡಿದರೆ ರೈತರ ಕಷ್ಟ ಅರ್ಥ ಆಗುತ್ತದೆ ಎಂದು ಹೇಳಿದರು.
28 ಕ್ಷೇತ್ರಗಳಲ್ಲಿಯೂ ಗೆಲ್ಲುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಉಭಯ ಪಕ್ಷಗಳ ನಾಯಕರು ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯು 10 ವರ್ಷದಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹಾಸನದ ಬಿಜೆಪಿ ಅಭ್ಯರ್ಥಿ ತಮ್ಮ ಭವಿಷ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದಾರೆ. ಅವರಿಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತೆ ಇಲ್ಲ. ಜಿಲ್ಲೆಯ ಅಭಿವೃದ್ಧಿಯ ಪರ ಯೋಚಿಸುವ ಅಭ್ಯರ್ಥಿಗೆ ಮತ ಹಾಕಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರವು ನನಗೆ ಹೆಲಿಕಾಪ್ಟರ್ ಸಿಗದಂತೆ ಮಾಡಿದೆ. ಬಿಜೆಪಿಯವರ ನಿರ್ದೇಶನದಂತೆ ಹೀಗೆ ಮಾಡಲಾಗಿದೆ. ನನ್ನಿಂದ ಹೆಚ್ಚು ಜನಸಂಪರ್ಕವಾಗದಂತೆ ಮಾಡಲು ಈ ರೀತಿ ಕೀಳುಮಟ್ಟದ ರಾಜಕಾರಣ ಮಾಡಲಾಗಿದೆ ಎಂದು ಆರೋಪಿಸಿದರು.

ಮೋದಿಗೆ ಗೆಲುವು ಸುಲಭವಲ್ಲ
ಕೇಂದ್ರ ಸರ್ಕಾರದ ನೀತಿಗಳಿಂದ ರೈತರು ನೊಂದಿದ್ದಾರೆ. ನರೇಂದ್ರ ಮೋದಿ ಅವರಿಗೆ ಈ ಚುನಾವಣೆ ಸುಲಭವಲ್ಲ. 2014ರಲ್ಲಿನ ಪರಿಸ್ಥಿತಿಯೇ ಬೇರೆ, 2019ರ ಪರಿಸ್ಥಿತಿಯೇ ಬೇರೆ. ಅವರು ಅಭಿವೃದ್ಧಿ ಕೆಲಸಗಳನ್ನು ಸರಿಯಾಗಿ ಮಾಡಿದ್ದರೆ ಬೇರೆ ಪಕ್ಷಗಳ ಬಳಿ ಹೋಗಬೇಕಾಗುತ್ತಿರಲಿಲ್ಲ. ನಮ್ಮದು ಕಿಚಡಿ ಪಾರ್ಟಿ ಎನ್ನುವ ಅವರು ಈಗ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ದೇವೇಗೌಡರಿಗೆ ದೊಡ್ಡ ಸ್ಥಾನ
ರಾಷ್ಟ್ರಮಟ್ಟದಲ್ಲಿ ದೇವೇಗೌಡ ಅವರಿಗೆ ಸೂಕ್ತ ಗೌರವ ನೀಡುವ ವಾತಾವರಣ ನಿರ್ಮಾಣ ಆಗುತ್ತದೆ. ಅವರಿಗೆ ಜವಾಬ್ದಾರಿಯುತ ಸ್ಥಾನ ಸಿಗಲಿದೆ. ಹಾಗೆಂದು ದೇವೇಗೌಡ ಅವರು ಪ್ರಧಾನಿಯಾಗುತ್ತಾರೆ ಎಂದು ನಾನು ಹೇಳುವುದಿಲ್ಲ ಎಂದರು. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಬಗ್ಗೆ ಚರ್ಚಿಸಲಾಗುವುದು. ಈ ಬಗ್ಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಜಾತಿ ರಾಜಕೀಯ ಮಾಡೊಲ್ಲ
ನಾನೆಂದೂ ಜಾತಿ ರಾಜಕಾರಣ ಮಾಡಿಲ್ಲ. ನನ್ನ ಬಳಿ ಬಂದವರ ಜಾತಿಯನ್ನು ಕೇಳುವುದಿಲ್ಲ. ಎಲ್ಲ ಜಾತಿಯವರಿಗೂ ಕೆಲಸ ಮಾಡಿಕೊಡುತ್ತೇನೆ. ಬಡವರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತೇನೆ. ಜಾತಿಗೆ ಪ್ರಾಧಾನ್ಯ ಕೊಡುವುದಿಲ್ಲ ಎಂದು ಹೇಳಿದರು.

ಬೇರೆಲ್ಲೂ ಗುತ್ತಿಗೆದಾರರಿಲ್ಲವೇ?
ಆದಾಯ ತೆರಿಗೆ ಇಲಾಖೆಯ ದಾಳಿಗೆ ನನ್ನ ವಿರೋಧ ಇಲ್ಲ. ಆದರೆ, ಮಂಡ್ಯ ಮತ್ತು ಹಾಸನ ಜಿಲ್ಲೆಯನ್ನೇ ಏಕೆ ಐಟಿ ದಾಳಿಗೆ ಆಯ್ದುಕೊಂಡರು ಎನ್ನುವುದು ನನ್ನ ಪ್ರಶ್ನೆ. ರಾಜ್ಯದಲ್ಲಿ ಬೇರೆ ಎಲ್ಲಿಯೂ ಗುತ್ತಿಗೆದಾರರು ಇಲ್ಲವೇ? ಈ ದಾಳಿ ಕೇಂದ್ರ ಸರ್ಕಾರದ ಪ್ರಾಯೋಜಿತ. ಐಟಿ ದಾಳಿಯಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.

ದೇವೇಗೌಡ, ಸಿದ್ದರಾಮಯ್ಯ ಪ್ರಚಾರ
ಮಂಡ್ಯದಲ್ಲಿ ಕಾರ್ಯಕರ್ತರ ಹೊಂದಾಣಿಕೆ ವಿಚಾರದಲ್ಲಿ ಸಮಸ್ಯೆ ಇದೆ. ಇದರಿಂದ ಅಕ್ಕಪಕ್ಕದ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಮಸ್ಯೆಗಳುಂಟಾಗುತ್ತಿದೆ. ಇದನ್ನು ನಾಯಕರ ಜತೆ ಚರ್ಚಿಸಿ ಸರಿಪಡಿಸುತ್ತೇವೆ. ಹೀಗಾಗಿ ಖುದ್ದಾಗಿ ಜನರ ಬಳಿಗೆ ತೆರಳುತ್ತಿದ್ದೇನೆ. ಏಪ್ರಿಲ್ 8ರಿಂದ ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ನಿಖಿಲ್ ಪರ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ವಾಹನ ತಪಾಸಣೆ
ಇದಕ್ಕೂ ಮೊದಲು ಹಾಸನಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿದ್ದ ಕಾರನ್ನು ಹಿರಿಸಾವೆ ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ಸಿಬ್ಬಂದಿ ತಡೆದು ತಪಾಸಣೆ ನಡೆಸಿದರು. ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಅವರ ಮನೆಗೆ ಹೊರಟಿದ್ದ ಕುಮಾರಸ್ವಾಮಿ ಅವರಿಗೆ ನೀತಿ ಸಂಹಿತೆಯ ಬಿಸಿ ಎದುರಾಯಿತು. ಈ ವೇಳೆ ಅವರು ಭದ್ರತಾ ಸಿಬ್ಬಂದಿಯ ಕಾರ್ಯಕ್ಕೆ ಸಹಕರಿಸಿದರು.












Click it and Unblock the Notifications