ಚರ್ಮಗಂಟು ರೋಗ: ಬೂಕನಬೆಟ್ಟದ ದನಗಳ ಜಾತ್ರೆ ನಿಷೇಧಕ್ಕೆ ರೈತರ ಆಕ್ರೋಶ
ಹಾಸನ ಜನವರಿ 9: ಇಡೀ ರಾಜ್ಯದಲ್ಲೇ ಹೆಸರು ವಾಸಿಯಾಗಿರುವ ಐತಿಹಾಸಿಕ ಬೂಕನಬೆಟ್ಟ ದನಗಳ ಜಾತ್ರೆಗೆ ಈ ಬಾರಿ ಚರ್ಮಗಂಟು ರೋಗದ ಕರಿ ಛಾಯೆ ಆವರಿಸಿದೆ. ಚರ್ಮಗಂಟು ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನವರಿ 9 ರಿಂದ ಜನವರಿ 22ರವರೆಗೆ ಜಿಲ್ಲೆಯಾದ್ಯಂತ ದನಗಳ ಜಾತ್ರೆ ಹಾಗೂ ಸಂತೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಸ್ಥಳೀಯ ಶಾಸಕರು ಕಳೆದ ವಾರ ರೈತರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಮೂರು ದಿನಗಳ ಕಾಲ ಜಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಿಲ್ಲ. ಜಾತ್ರೆಗೆ ಯಾವುದೇ ರಾಸುಗಳನ್ನು ತರದಂತೆ ಪೊಲೀಸರು ಸರ್ಪಗಾವಲು ಹಾಕಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಬೂಕನಬೆಟ್ಟದ ರಂಗನಾಥಸ್ವಾಮಿ ದೇವರ ದನಗಳ ಜಾತ್ರೆಗೆ ಇತಿಹಾಸ ಇದೆ. ಹಿಂದಿನಿಂದಲೂ ಹದಿನೈದು ದಿನಗಳ ಕಾಲ ಜಾನುವಾರುಗಳ ಜಾತ್ರೆ ನಡೆಯುತ್ತಿತ್ತು. ದುಬಾರಿ ಬೆಲೆಯ ಸಾವಿರಾರು ರಾಸುಗಳು ಒಂದೆಡೆ ಸೇರುತ್ತಿದ್ದವು.

ದನಗಳ ಜಾತ್ರೆಗೆ ಆವರಿಸಿದ ಚರ್ಮಗಂಟು ರೋಗದ ಕರಿ ಛಾಯೆ
ಉತ್ತರ ಕರ್ನಾಟಕ ಹಾಗೂ ಹಾಸನ ಜಿಲ್ಲೆಯ ಅಕ್ಕಪಕ್ಕದ ಜಿಲ್ಲೆಗಳಿಂದ ನೂರಾರು ರೈತರು ಬಂದು ರಾಸುಗಳನ್ನು ಖರೀದಿಸುತ್ತಿದ್ದರು. ಕೊರೊನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ರಾಸುಗಳ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಅದ್ಧೂರಿಯಾಗಿ ನಡೆಸಲು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ನಿರ್ಧರಿಸಿದ್ದರು. ಆದರೀಗ ಜಿಲ್ಲಾಡಳಿತ ದನಗಳ ಜಾತ್ರೆಗೆ ನಿಷೇಧ ಹೇರಿದೆ. ಇದು ರೈತರು ಹಾಗೂ ಜಾನುವಾರು ಪ್ರಿಯರನ್ನು ಕೆರಳಿಸಿದೆ. ಚರ್ಮಗಂಟು ರೋಗ ಜಿಲ್ಲೆಯಲ್ಲಿ ಹೆಚ್ಚಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಒಂದೆಡೆ ರಾಸುಗಳು ಸೇರಿದಾಗ ರೋಗ ವೇಗವಾಗಿ ಜಾನುವಾರುಗಳಿಗೆ ಹಬ್ಬುವ ಕಾರಣದಿಂದ ಕಳೆದ ಎರಡು ತಿಂಗಳಿನಿಂದ ದನಗಳ ಸಂತೆ ಹಾಗೂ ಜಾತ್ರೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದರಿಂದ ರೈತರು ಎತ್ತುಗಳನ್ನು ಮಾರಾಟ ಮಾಡಲು ಆಗದೆ ಕೊಳ್ಳಲು ಆಗದೆ ಪರದಾಡುವಂತಾಗಿತ್ತು.

ರೈತರ ಆಕ್ರೋಶಕ್ಕೆ ಕಾರಣವಾದ ಜಿಲ್ಲಾಡಳಿತದ ನಿರ್ಧಾರ
ಚರ್ಮಗಂಟು ರೋಗ ಕಡಿಮೆಯಾಗುತ್ತಿದ್ದ ಕಾರಣ ಐತಿಹಾಸಿಕ ಬೂಕನಬೆಟ್ಟದ ರಂಗನಾಥಸ್ವಾಮಿಯವರ 92ನೇ ರಾಸುಗಳ ಜಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಚರ್ಮಗಂಟು ರೋಗ ಸಂಪೂರ್ಣ ಕಡಿಯಾಗದ ಹಿನ್ನಲೆಯಲ್ಲಿ ಶ್ರವಣ ಬೆಳಗೊಳದ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ನೇತೃತ್ವದಲ್ಲಿ ಕಳೆದ ವಾರ ರೈತರು ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಜೊತೆ ಸಭೆ ನಡೆಸಿ ಮೂರು ದಿನಗಳ ಕಾಲ ಮಾತ್ರ ರಾಸುಗಳ ಜಾತ್ರೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದರು. ಆದರೆ ಇದಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿರುವುದು ರೈತರ ಆಕ್ರೋಶ ಕಾರಣವಾಗಿದೆ.

ದನಗಳ ಜಾತ್ರೆಗೆ ಸಿದ್ಧತೆ ನಡೆಸಿದ್ದ ರೈತರು
ಬೂಕನಬೆಟ್ಟಕ್ಕೆ ಆಗಮಿಸುವ ಪ್ರವೇಶದ್ವಾರ ಹಾಗೂ ಇತರೆ ರಸ್ತೆಗಳಲ್ಲಿ ಜಾತ್ರೆ ನಿಷೇಧಿಸಿದೆ ಎಂಬ ಫ್ಲೆಕ್ಸ್ ಹಾಕಿ ಪೊಲೀಸರನ್ನು ನಿಯೋಜಿಸಿದೆ. ಆದರೆ ರೈತರು ಹಾಗೂ ಜಾನುವಾರು ವ್ಯಾಪಾರಿಗಳು ಮೂರು ದಿನ ಜಾತ್ರೆ ನಡೆಯುತ್ತದೆ ಎಂದು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಆರಂಭಿಸಿದ್ದಾರೆ. ಹಿಂದೆಲ್ಲಾ ಜಾತ್ರೆಯ ಆವರಣವನ್ನು ತಾಲೂಕು ಆಡಳಿತ ಸ್ವಚ್ಛಗೊಳಿಸಿ ರಾಸುಗಳನ್ನು ಕಟ್ಟಲು ಹಾಗೂ ಅವುಗಳಿಗೆ ಮೇವು, ಕುಡಿಯುವ ನೀರು ವ್ಯವಸ್ಥೆ ಮಾಡುತ್ತಿತ್ತು. ಆದರೆ ಚರ್ಮಗಂಟು ರೋಗದ ಕಾರಣ ತಾಲೂಕು ಆಡಳಿತ ತಲೆಕೆಡಿಸಿಕೊಳ್ಳದ ಕಾರಣ ರೈತರೇ ರಾಸುಗಳನ್ನು ಕಟ್ಟಲು ಗಿಡಗಂಟೆಗಳನ್ನು ಕಿತ್ತು, ಜಾಗವನ್ನು ಸ್ವಚ್ಛಗೊಳಿಸಿ ಸಿದ್ಧತೆ ಮಾಡಿಕೊಂಡಿದ್ದು, ಒಂದು ವರ್ಷದಿಂದ ಎತ್ತುಗಳನ್ನು ಸಾಕಿ ಬೂಕನಬೆಟ್ಟದ ಜಾತ್ರೆಯಲ್ಲಿ ಅವುಗಳನ್ನು ಮಾರಾಟ ಮಾಡಿ ಬದಲಾಯಿಸಲು ಸಿದ್ಧರಾಗಿದ್ದರು.

ದನಗಳ ಜಾತ್ರೆಯಿಂದ ನೂರಾರು ಜನರಿಗೆ ಲಾಭ
ಬೂಕನಬೆಟ್ಟ ರಾಸುಗಳ ಜಾತ್ರೆಗೆ ಬಿಜಾಪುರ, ಯಾದಗಿರಿ, ಧಾರವಾಡ,ಬಹುಬ್ಬಳ್ಳಿ, ಶಿವಮೊಗ್ಗ, ಮಂಡ್ಯ, ಮೈಸೂರು, ಬಳ್ಳಾರಿ, ತುಮಕೂರು, ರಾಮನಗರ ಸೇರಿದಂತೆ ಹಲವೆಡೆಗಳಿಂದ ರಾಸುಗಳನ್ನು ಖರೀಸಿಸಲು ಆಗಮಿಸುತ್ತಾರೆ. ಐವತ್ತು ಸಾವಿರದಿಂದ ಏಳು ಲಕ್ಷದವರೆಗೆ ಬೆಲೆ ಬಾಳುವ ಇಪ್ಪತ್ತು ಸಾವಿರ ಜಾನುವಾರುಗಳು ಜಾತ್ರೆಯಲ್ಲಿ ಸೇರಲಿದ್ದು, ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ. ಆದ್ದರಿಂದ ಮೂರು ದಿನ ಜಾತ್ರೆಗೆ ಅವಕಾಶ ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಸಿಹಿ ತಿನಿಸು, ಆಟಿಕೆ, ಕೃಷಿ ಉಪಯೋಗಿ ಅಂಗಡಿಗಳು, ಹೋಟೆಲ್‌ಗಳು ಹಾಗೂ ಗೂಡಂಗಡಿಗಳನ್ನು ತೆರೆಯಲಾಗಿದ್ದು, ಜಾತ್ರೆ ನಿಷೇಧಿಸಿದರೆ ಎಲ್ಲರಿಗೂ ಭಾರೀ ನಷ್ಟವಾಗುತ್ತದೆ, ಆದ್ದರಿಂದ ಮೂರು ದಿನ ಕಾಲ ದನಗಳ ಜಾತ್ರೆ ನಡೆಸಲು ಅವಕಾಶ ಕಲ್ಪಿಸುವಂತೆ ರೈತರು ಪಟ್ಟು ಹಿಡಿದಿದ್ದಾರೆ.
ಕೊರೊನ ಹೊಡೆತದಿಂದ ಹೊರಬಂದು ಎಲ್ಲಾ ಚಟುವಟಿಕೆಗಳು ಆರಂಭಗೊಂಡಿದೆ. ಆದರೆ ದೇಶದ ಬೆನ್ನೆಲುಬು ರೈತರು ಸಾಕಿದ ದನಗಳ ಜಾತ್ರೆ, ವ್ಯಾಪಾರ, ವಹಿವಾಟು ಹಾಗೂ ಪ್ರದರ್ಶನಕ್ಕೆ ಚರ್ಮಗಂಟು ರೋಗ ಅಡ್ಡಿಯಾಗಿರುವುದು ರೈತರಿಗೆ ಬೇಸರ ತರಿಸಿದೆ. ಒಂದು ವೇಳೆ ಜಾನುವಾರುಗಳಿಗೆ ಚರ್ಮಗಂಟು ರೋಗ ತಗಲಿದರೆ ನಾವೇ ಜವಾಬ್ದಾರರು, ನಮಗೆ ಸರ್ಕಾರದ ಪರಿಹಾರವೇ ಬೇಡ ಜಾತ್ರೆ ನಡೆಸಲು ಅವಕಾಶ ಕೊಡಲೇಬೇಕು ಎಂದು ರೈತರು ಒತ್ತಾಯಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಕಾದುನೋಡಬೇಕಿದೆ.











Click it and Unblock the Notifications