ಅಭಿವೃದ್ಧಿ ಕೆಲಸದಲ್ಲಿ ಸದಾ ಮುಂದೆ: ಪತಿ ರೇವಣ್ಣ ಅವರನ್ನು ಹಾಡಿ ಹೊಗಳಿದ ಭವಾನಿ
ಹಾಸನ, ಫೆಬ್ರವರಿ 7: 'ರೇವಣ್ಣ ಅವರು ಹಾಸನ-ಚನ್ನರಾಯಪಟ್ಟಣ ಕ್ರಾಸ್ ಆದರು ಅಂದರೆ ಯಾವುದೋ ಫೈಲ್ ಹಿಡಿದು ಬೆಂಗಳೂರಿಗೆ ಹೊರಟಿದ್ದಾರೆ ಎಂದರ್ಥ. ಅತ್ತ ಕಡೆಯಿಂದ ನೆಲಮಂಗಲ ಬಿಟ್ಟರು ಅಂದರೆ ಕೆಲಸ ಮಾಡಿಸಿಕೊಂಡು ವಾಪಸ್ ಬರ್ತಿದ್ದಾರೆ ಎಂದೇ ಯೋಚನೆ ಮಾಡ್ತೀವಿ'
-ಪತಿ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಕುರಿತು ಅವರ ಪತ್ನಿ ಭವಾನಿ ರೇವಣ್ಣ ಮಾಡಿದ ಗುಣಗಾನವಿದು.
ಹಾಸನ ಸಮೀಪದ ಹೊನ್ನೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ ಭವಾನಿ ರೇವಣ್ಣ, ಪತಿಯ ಕಾರ್ಯವೈಖರಿಯನ್ನು ಹಾಡಿಹೊಗಳಿದರು.

ಬೆಂಗಳೂರಿಗೆ ತೆರಳಿದ ರೇವಣ್ಣ ಅಲ್ಲಿಯೇ ಉಳಿದಿದ್ದಾರೆ ಎಂದರೆ ಕೆಲಸಕ್ಕೆ ಸಂಬಂಧಿಸಿದ ಸಚಿವರೋ ಅಧಿಕಾರಿಯೋ ಸಿಕ್ಕಿಲ್ಲ ಎಂದರ್ಥ. ಕೆಲಸ ಮಾಡಿರುವುದರಲ್ಲಿ ರೇವಣ್ಣ ಸದಾ ಮುಂದು. ಕೆಲಸ ಮಾಡಿರುವ ವಿಚಾರದಲ್ಲಿ ಅವರು ಮುಂಚೂಣಿಯಲ್ಲಿರುತ್ತಾರೆ. ಅವರಿಗೆ ನಮ್ಮ ಕುಟುಂಬ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.
ಹಾಸನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದರೂ ಅದರಲ್ಲಿ ರೇವಣ್ಣ ಅವರ ಪರಿಶ್ರಮ ಇದ್ದೇ ಇರುತ್ತದೆ. ಅವರಿಗೆ ರಾಜ್ಯವೇ ಒಂದು ಕಣ್ಣಾದರೆ ಹಾಸನವೇ ಒಂದು ಕಣ್ಣು ಎಂದು ಜನರು ಮಾತನಾಡುತ್ತಾರೆ. ಅದಕ್ಕೆ ತಕ್ಕಂತೆ ರೇವಣ್ಣ ಅವರೂ ಸಾಕಷ್ಟು ಅನುದಾನಗಳನ್ನು ತಂದುಕೊಡುತ್ತಾರೆ.
ರೇವಣ್ಣ ಅವರು ಸದಾ ದೊಡ್ಡ ಕೆಲಸಗಳ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಸಣ್ಣಪುಟ್ಟ ಕೆಲಸಗಳನ್ನು ಕೇಳಿದಾಗ ಮಾಡಿಸೋಣ ಎನ್ನುತ್ತಾರೆ. ಆದರೆ, ಯಾವುದನ್ನೂ ಅವರು ಕೈಬಿಡುವುದಿಲ್ಲ. ಆಗುವುದಿಲ್ಲ ಎಂಬ ಪದವೇ ಅವರ ಬಳಿಯಿಲ್ಲ ಎಂದು ಹೊಗಳಿದರು.












Click it and Unblock the Notifications